ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ