ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ
ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ.
ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು
ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು
ಸುಸ್ವಭಾವದ ಸರಳ ಹೃದಯಾನ್ವಿತಳು ನೀನು
ಕಪಟ ಕಿರಾತನವನು 1
ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು
ಕಪಟ ವೇಷದೊಳು ಬಂದ ವಿಷಕಂಠನವನು
ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು
ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2
ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು
ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು
ಮೂಜಗವು ಮೋಹಿಸುವ ಕೋಮಲಾಂಗಿಯು ನೀನು
ಈ ಜಗವರಿಯೆ ಸರ್ವದ ಭಸ್ಮಾಂಗನವನು 3
ಕನಕ ಮಣಿಮಯದಂತಃಪುರವಾಸಿಯು ನೀನು
ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು
ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು
ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4
ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು
ಕೋರಿ ಗಜಚರ್ಮಧರಿಸುವ ಭಿಕಾರಿಯವನು
ಭೂರಿ ಸುಖಭೋಗಂಗಳನನುಭವಿಸುವೆ ನೀನು
ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5
ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು
ಕರುಣವಿಲ್ಲದೆ ಮೂಜಗವನುರುಹುವನವನು
ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು
ನರನಾದ ಭಕ್ತನೊಳು ಹೋರಾಡಿದವನು 6
ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು
ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ
ಗಂಗಾಜನಕನ ಪ್ರಿಯತಮ ಸೋದರಿಯು ನೀನು
ರಂಗೇಶವಿಠಲನ ಚರಣ ಸೇವಕನವನು 7