ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾರಲ್ಲಿ ಪೋದರು ನೀರಾದರೂ ಕೊಡರು ಪ ದೂರ ಹೋಗೆಂಬರು ಬದಿಸೇರಲೀಸರು ಅ.ಪ ಹಸಿವು ತೃಷೆಗಳಿಂದಲಿ ವ್ಯಸನವಪಡುತಲಿ ಉಸುರುಸುರೆನುತಲಿ ಬಸವಳಿದು ಭಯದಲಿ 1 ರೋಗದಲಿ ಬಳಲುತ ಹ್ಯಾಗಿನ್ನು ಎನ್ನುತ ಕೂಗುತ್ತ ಬಾಯ್ಬಿಡುತ ಎಲ್ಲರನು ಬೇಡುತ 2 ಗುರುರಾಮವಿಠಲನ ನೆರೆ ನಂಬದಿರುವನ ಪರಿಪರಿಯಲಿ ಜನ ಬಯ್ಯುವರನುದಿನ 3
--------------
ಗುರುರಾಮವಿಠಲ
ಲೋಕನೀತಿ ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ಪ. ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ ಮತ್ತೆ ಇರಬಹುದೆ ಹರಿಯೆ ಅ.ಪ. ಆರಿಗಾರಾಗುವರೊ ಪ್ರಾರಬ್ಧ ನೀಗದಲೆ ಶೌರಿ ದಾರಿಯ ತೋರನು ಈ ರೀತಿಯರಿತು ಹೇ ದುರ್ಮನವೆ ನರಹರಿಯ ಆರಾಧನೆಯನೆ ಮಾಡೊ 1 ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು ಏಕ ಮನದಲ್ಲಿ ಭಜಿಸು ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ ನೂಕು ಭವತಾಪ ಜಗದಿ 2 ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು ಈ ಪರಿಯಿಂದ ಭಜಿಸು ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ ತಾಪ ಹರಿಸುವನು ಭವದಿ 3
--------------
ಅಂಬಾಬಾಯಿ
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು