ಮರೆಯದಿರು ಮರೆಯದಿರು ಹರಿಯನು ಪಾಪಿ ಪ
ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ.
ಮೂರು ದಿನ ಬಾಳ್ವ ಸಂಸಾರವ ನೋಡಿ
ಬಾರಿ ಹರುಷಿಸದಿರು ನೀನೆಲೊ ಖೋಡಿ 1
ಮತಿವಂತನಾದರೆ ಹರಿಪುರಕೆ ಪೋದಿ
ಸತಿಸುತರ ನಂಬೆ ನಿನ ಬಾಯಲಿ ಬೂದಿ 2
ಸಿರಿಯ ನಂಬಿದ ದುರ್ಯೋಧನ ಬಿದ್ದ
ಹರಿಯ ನಂಬಿದ ಭೀಮಸೇನನು ಗೆದ್ದ 3
ಆನೆ ಕುದುರೆ ರಥ ಭಂಡಾರವು ನಿಂದೆ
ಪ್ರಾಣ ಹೋಗುವಾಗವು ಬಾರವು ಹಿಂದೆ 4
ರಂಗೇಶವಿಠಲನ ನಂಬಿದವ ಜಾಣ
ಅಂಗನೆಯರ ನಂಬಿದ ಮನುಜನೆ ಕೋಣ 5