(ಅನಂತೇಶ್ವರ ದೇವರನ್ನು ನೆನೆದು)
ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ
ಲೋಕೋತ್ತಮಾನಂತೇಶ್ವರ ದೇವಾಲಯದಿ ಪ.
ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ
ಝಡಿದು ಬರುತಿಹುದು ಭೋರ್ಗುಡಿಪ ತೆರೆಯ
ಝಡಿವ ನಾದಕೆ ಒಡಂಬಡದೇಕಾಂತದಿ ಬಂದು
ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ 1
ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳು
ಭಾರವನು ಪೊತ್ತು ಬಹಳಾಲಸ್ಯವೋ
ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ
ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ 2
ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ-
ಬೇಡಿದೆನು ಎಂಬ ನಾಚಿಕೆಯ ಮನವೋ
ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು
ಕೋಡಗರ ಕೂಡಿ ರಥ ಓಡಿಸಿದ ಬೇಸರವೋ 3
ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ
ಕಾಲದೊಳು ಗೈವಂತಮೇಲುಕಾರಿಯದ
ಕಾಲೋಚಿತವ ಮನದೊಳಾಲೋಚಿಸುತ್ತಹಿಯ
ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ 4
ಯುಗಯುಗದೊಳವತಿರಿಸ ಜಗದ ಭಾರವನಿಳುಹಿ
ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ
ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ
ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ 5
ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ-
ಗಲಭೆಯುಂಟೆಂದಲ್ಲಿ ನಿ¯ದೆ ಈಗ
ಲಲನೆಯಳ ಕೂಡೆ ಸರಸಗಳನಾಡಲು ತನಗೆ
ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ 6
ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ
ಸಾರುವುದು ಕರುಣವನು ತೋರೆನ್ನ ದೊರೆಯೇ
ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ-
ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ 7