ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು
ನಿನ್ನ ಕ್ಲೇಶವ ಕೇಳೆ ಎನಗೆ ಮರುಕಪ ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು ಅದಕೆಲ್ಲ ಅನ್ನವೀಯುವ ಚಿಂತೆಯು ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ ಹಗಲಿರುಳು ಪ್ರೇರಣೆಯ ಮಾಡುವಾತಂಕ 1 ಹಿರಿಮಗನದೊಂದುಸಿರ ತರಿದರೆಂಬಾತಂಕ ಕಿರಿಮಗನ ದೇಹ ಪೊಸಕಿದ ಚಿಂತೆಯು ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು ಕಿರಿಯುವಾತಂಕಕ್ಕೆ ಹರವು ತೆರವಿಲ್ಲ 2 ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ ಮಂಚದಲಿ ಘಟಸರ್ಪ ವಿಷದ ಚಿಂತೆ ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ ವಂಚಕರು ಏನು ಮಾಡುವರೆಂಬ ಚಿಂತೆ 3 ಹಲವು ವಿಧ ವೇಷಗಳ ತಾಳಿ ಜಗಂಗಳಲಿ ನೀ ತಲೆಯ ಮರಿಸಿಕೊಂಡರೇನು ಫಲವೊ ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ 4 ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು ಗೋಪಿಯರ ಸಾಸಿರದ ಗೋಳು ನಿನಗೆ ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ 5 ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ ನಿನ್ನ ನೋಡಲು ಎನಗೆ ಬೇಸರವು ಜಗಕೆ ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ 6
--------------
ವಿದ್ಯಾಪ್ರಸನ್ನತೀರ್ಥರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು