ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಭಿಯು ಬೇಡಲು ಲಾಭವೇನಿರುವುದು ನಾಭಿಯು ಒಣಗುವುದು ಪ ಲೋಭಿಗೆ ಧನದಿಂದ ಶೋಭೆಯುಂಟೆ ಮನ ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ ಕೋರನು ನವವಸನ | ಏನೆಂದು ಕೋರನು ನವವಸನ ಮೂರು ಕಾಸಿಗೆರಡು ಮಾರುತಿದ್ದರು ಅದ ದೂರದಿ ತ್ಯಜಿಸುವನು | ನೂತÀನವಸ್ತ್ರ ದೂರದಿ ತ್ಯಜಿಸುವನು 1 ಬಂಧು ಜನರು ತನ್ನ ಮಂದಿರಕ್ಕಿಳಿಯಲು ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ ತೊಂದರೆಗಳ ಪೊಂದಿಹೆನೆನ್ನುತ ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ 2 ಮುಗ್ಗಿದ ಧವಸವು ಅಗ್ಗÀದಿ ಮಾರಲು ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು 3 ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ ಗೆಣೆಯನಿವನು ನಾಲ್ಕಾಣೆಯ ಕಂಡರೆ ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ4 ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು 5 ನುಡಿದರೆ ಸವಿಮಾತ ಒಡವೆ ವಸನಗಳಿ ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ ಕರವ ಪಿಡಿವ ತನ್ನ ಮಡದಿಯ ಕಂಡರೆ ಸಿಡಿಮಿಡಿಗÀುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು 6 ರಾಯರೆ ನಿಮ್ಮ ಸಹಾಯ ಹೊರತು ಕಾಣೆನೆನಲು ಕಾಯುವ ಧಣಿ ನಾರಾಯಣನೆನುತಲಿ ನುಡಿಯುವನು 7 ಈ ಧನವೆ ದೊಡ್ಡ ಸಾಧನವೆನ್ನುವ ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು ಪಾದ ಕಮಲದಲಿ ಆದರವರಿಯನಿವ | ಎಂದೆಂದಿಗು ಆದರವರಿಯನಿವ 8 ಘನತೆಯು ಬೇಡವು ಜನತೆಯು ಬೇಡವು ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು9 ಗಳಿಸಿದವನ ಧನ ಬಳಸಿದವನಿಗೆಂಬ ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ 10 ಭುಜಗಶಯನ ಹರಿ ಸುಜನರು ತನ್ನನು ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ 11
--------------
ವಿದ್ಯಾಪ್ರಸನ್ನತೀರ್ಥರು