ಒಟ್ಟು 6 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣಾಕರನೆ ನೀಯನ್ನಾ ಕಾಯೋ ಆನಾಥರಕ್ಷಕ ದಯಾಸಿಂಧೂ ಪ. ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ. ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 1 ತರುಳ ಕರಿಯಲು ಕಂಭದಿ ಬಂದು ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ ನರಮೃಗರೂಪಿನಲಿ ಪ್ರಹ್ಲಾದಗೆ ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 2 ಜಲದೊಳಗೆ ನೆಗಳೆಯು ಹಿಡಿದು ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು ನಿಲ್ಲದೆ ಬಂದೊದಗಿನೆಗಳೆಯನು ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ 3 ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ ದೇವರದೇವ ಶ್ರೀ ವೆಂಕಟೇಶ್ವರನೆ 4 ಶಂಖಚಕ್ರಧರ ನಿನ್ನ ಚರಣವನು ನಂಬಿದೆ ಪಕ್ಷಿವಾಹನಸ್ವಾಮಿ ಕರುಣಾನಿಧೆ ಹೆಳವನಕಟ್ಟೆಯೊಳು ನಿಂದು ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ 1 ಹತ್ತು ಅವತಾರದಲಿ ಇದಿರಾಂತವರ ಗೆಲಿದು ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ 2 ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸ- ಹೃದಯ ಭಕ್ತರನು ಕಾಯ್ದು ಪಾಲಿಸುವೆ ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾರಿಜಾತ ಶ್ಲೋಕ : ದ್ವಾರಾವತಿಯಲಿ ದÀನುಜದಲ್ಲಣ ಮುಕುಂದ ಸಾರೆ ರುಕ್ಮಿಣಿಸಹಿತ ಆನಂದದಿಂದ ವಾರಿಜಾಂಬಕ ವಾಲಗದೊಳು ಚಂದ ನಾರಂದಮುನಿ ತಾ ಪಾರಿಜಾತವ ತಂದ 1 ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು ಮನದಲ್ಲಿ ಅತಿನೊಂದು 1 ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು ಮಂದಗಮನೆಯ ಮುಡಿಗೆ ತಾ ಮುಡಿಸಿದನು ಎರವು ಇಲ್ಲವು ಕಾಣಿ ಇಂದು ಮಾಡಿದ ಕುಹಕವ ಕೃಷ್ಣ ತಾನು 2 ಇನ್ನಾರಿಗೆ ಪೇಳುವೆನು ರುಕ್ಮಿಣಿ ತನ್ನ ಜೀವ ಬಹುಪ್ರೀತಿ ಬಡಿಸಿದ ಠಕ್ಕುಠವಳಿಗಳಿಲ್ಲಿ 2 ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ ಹಚ್ಚಿರೆ ಮಾತ ಹರಿಯು ತಾ ಕೇಳಿದನೆ ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ 3 ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ ಕಂತು ಕಮಲಜನಯ್ಯ ಏನೆಂದು ತಿಳಿಯದು ಬಹು ಪ್ರೀತಿ ಇದ್ದವ[ಳ] 3 ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ ಗಿಳಿಇಲ್ಲದ ಗೂಡು ತಾನ್ಯಾತಕಮ್ಮ ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ 4 ಮಾತೆನ್ನ್ಯಾಕ ಪಡೆದಳೊ ಕುಹಕ ಮೂರುಲೋಕ ಪ್ರಸಿದ್ಧ ಓಡಿ ತನಗ್ಯಾಕಿದು ಬ್ಯಾಡಿ 4 ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು ವಶವಾದನೆ ಒಲಿದು ರುಕ್ಮಿಣಿಗೆ ತಾನು ಅಟ್ಟುಳಿ ಇದೇನು ಆಸೆಬಟ್ಟೆನೆ ಬಹಳ ವಸುದೇವ ಸುತಗೆ 5 ಎಲ್ಲರೊಡನೆ ಕೋಪಿಸುತ ಮನದೊಳು ಮರುಗುತ ಸುರಪಾರಿಜಾತವೆ 5 ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ ಜೀವದೊಲ್ಲಭೆಯೊಡನೆ ಪಂಥವು ಸಲ್ಲ 6 ಎನ್ನೊಡನೆ ನುಡಿಯಳೊ ಇಂದು ಅಪ್ರಬುದ್ಧನಾದರೆ ಕೋಪವನು ತಾಳುವಳೊ ಇಂ ಬಾಗಿಲೊಳು ನಿಂದನು 6 ಶ್ಲೋಕ :ಚಿತ್ತದೊಲ್ಲಭೆ ಚದÀುರೆ ಮೋಹನಾಕಾರೆ ಮುತ್ತುರತ್ನವ ಮನೆಯೊಳಗೆಲ್ಲ ಬೀರಿ ಎತ್ತ ಹೋದಳೊ ಎನ್ನ ಪ್ರಾಣದ ನಾರಿ ಸತ್ಯಭಾಮೆಯ ಸುಳುಹು ಕಾಣೆನು ತೋರಿ 7 ಕೋಕಿಲವಾಣಿಯ ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು ಹಾರೈಸಿ ನಿಂತವರು ಕಣ್ಣು ಮಾ[ತಾ]ಡಿ 7 ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು ಸೂಸು ಪರಿಮಳ[ದ] ಪಾರಿಜಾತದ ಹೂವ ಹಾ- ರÉೈಸಿ ಕಂಗಳು ತೀರ[ವು] ನೋಡಿದಳು ಕಾಂತೆ 8 ಫಲ್ಗುಣನ ಸಾರಥಿಯ ಇದು ಏನು ಸೋಗೆಂದು ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ ಮುನಿಸ್ಯಾತಕೆನ್ನೊಡನೆ ಅಪರಾಧವ ಕ್ಷಮಿಸೆ 8 ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ ಮಿಕ್ಕ ಸತಿಯರಿಗ್ಯಾತಕೆಂಬ ಭಾವ ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ 9 ಮನ್ನಿಸೆ ಕೃಪಾಸಿಂಧು ಕೋಕಿಲಸ್ವರಗಾನೆ ಕುಳ್ಳಿರಿಸಿದ ಹೆಳವನಕಟ್ಟೆಯ ರಂಗನು ಕೃಪಾಂಗನು ದೇವೋತ್ತುಂಗ ವಿಕ್ರಮನು 9
--------------
ಹೆಳವನಕಟ್ಟೆ ಗಿರಿಯಮ್ಮ
ಮಳೆಯ ದಯಮಾಡೊ ರಂಗಯ್ಯ ನಿಮ್ಮ ಕರುಣ ತಪ್ಪಿದರೆ ಉಳಿಯದೀ ಲೋಕ ಪ. ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆÀರೆಗೆ ಬಂದು ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ 1 ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ ಮೊಗೆ ಮೊಗೆದು ಪಾತ್ರೆಯಲಿ ನಾರಿಯರು ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ2 ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ ಬಂದಿದೆ ಭಾದ್ರಪದ ಮಾಸವೀಗ ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ3
--------------
ಹೆಳವನಕಟ್ಟೆ ಗಿರಿಯಮ್ಮ
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ. ಧನದಾಸೆಯನು ಮರಿ ಮನುಮಥನ ಬಾಣಕಳುಕದಿರು ತೊಳಲದಿರು ನೆಲದಾಸೆಗೆ ನೀನದರ ಅನುವರಿತು ಹರಿಯ ಸ್ಮರಿಸು ಮನವೆ 1 ಅನ್ಯರಾಗುಣ ದೋಷಯಣಿಸದಲೆ ನಿನ್ನಿರವ ನೋಡು ಕಂಡ್ಯಾ ಮನವೆ ಬಂಣಗಾರಿಕೆಯು ಬರಿದೆ ಔದಂಬ್ರ- ಹಣ್ಣಿನಂತೀ ಕಾಯವು ಮನವೆ 2 ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ ಭ್ರಮೆಗೊಂಡು ಬಳಲಾದಿರೋ ಕಮಲಪತ್ರಕ್ಕೆ ಒಳಗಿನ ಜಲದಂತೆ ನೆಲಕೆ ನಿರ್ಲೇಪನಾಗೋ ಮನವೆ 3 ಈ ದೇಹ ಸ್ಥಿರವಲ್ಲವೊ ಕಾಲನಾ ಬಾಧೆಗೋಳಗಾಗದಿರೋ ಮನವೆ ಭೇದ ದುರ್ಗುಣವ ತ್ಯಜಿಸು ನೀ ಗೇರುಬೀಜದಂದದಿ ತಿಳಿಯೊ ಮನವೆ 4 ಮಾಡು ಹರಿಸೇವೆಯನ್ನು ಮನದಣಿಯೆ ಬೇಡು ಹರಿಭಕ್ತಿಯನ್ನು ಕೂಡು ಹೆಳವನಕಟ್ಟೆಯ ವೆಂಕಟನ ಬೇಡಿ ಮುಕ್ತಿಯನು ಪಡೆಯೊ ಮನವೆ 5
--------------
ಹೆಳವನಕಟ್ಟೆ ಗಿರಿಯಮ್ಮ