ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಬೇಡುವೆನೋ ನಿನ್ನ ಸೌಭಾಗ್ಯಸಾಗರ ಶ್ರೀ ಭೂ ನೀಳಾವರ ಭಾಗವತೋದ್ಧಾರ ಪ ಯಾವಾಗಲು ನಿನ್ನ ಬಳಿಯೊಳು ನಾನಿದ್ದು ಭಾವಿಸಿ ಕುಶಲದ ಮಾತನಾಡೀ ದೇವ ನಿನ್ನಯ ಪಾದಯುಗಳವನೊತ್ತುತೆ ಸೇವಿಸಿ ಸುಖಿಪಂತೆ ಕರುಣಿಸು ಮುರಹರ1 ಮುಂಗಡೆ ಕುಣಿ ಕುಣಿದಾಡಿ ಸ್ತೋತ್ರವ ಮಾಡಿ ಕಂಗಳೊಳಾನಂದಭಾಷ್ಪಗೂಡೀ ಅಂಗವ ಮರೆತೆನ್ನ ಕಂಠಗದ್ಗದವಪ್ಪ ಮಂಗಳಕರ ಭಕ್ತಿ ಕೃಪೆ ಮಾಡು ಶ್ರೀರಂಗ 2 ಹೆಜ್ಜಾಜಿಯ ಚೆನ್ನಕೇಶವ ಮಾಧವ ಹೆಜ್ಜೆ ಹೆಜ್ಜೆಗೆ ನಿನ್ನ ಸ್ಮರಣಿಯಿತ್ತು ಸಜ್ಜುಗೊಳಿಸಿ ಎನ್ನ ಹೃದಯಪೀಠದಿ ಕೂಡೊ ಅರ್ಜುನಸಾರಥಿ ಶ್ರೀಕೃಷ್ಣ ಪರಮಾತ್ಮ 3
--------------
ಶಾಮಶರ್ಮರು
ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಮಾಲೆಯ ಹಾಕುವೆ ಲೀಲೆಯಿಂ ತಳೆವುದು ಶ್ರೀಲಲನಾವರ ಪಾಲಿಸು ಕಂಠವ ಪ ಸಂಪಿಗೆ ಮಲ್ಲಿಗೆ ಮೊಲ್ಲೆಗುಲಾಬಿಯು ಸೊಂಪಿನ ಪಚ್ಚೆಯ ಇಂಪಿನಿಂ ಕಟ್ಟಿದ 1 ಮರುಗ ಸೇವಂತಿಗೆ ಪಾದರಿ ಹೂವಿನ ಮೆರೆವ ಮಂದಾರದ ಪಾರಿಜಾತದ ಸುರ 2 ಸುರಗಿ ಸುಗಂಧರಾಜ ಸುರಹೊನ್ನೆ ದವನವು ಪರಮಗುಣಾಕರ ವರದಹೆಜ್ಜಾಜಿಯ 3
--------------
ಶಾಮಶರ್ಮರು
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು