ಉರುಟಣೆ ಹಾಡು
ಪದ್ಮಾವತಿ ನಿಂತು ಮುದ್ದು ಪದ್ಮನಾಭನಿಗೆ
ಪದ್ಧತಿಯಲಿ ಉರುಟಾಣಿಯನು ಮಾಡಿದಳೊ ಪ.
ಪದ್ಮಾಕ್ಷ ನಿನ್ನಯ ಪಾದಪದ್ಮವನೆ ತೋರೀಗ
ಪದ್ಮರೇಖೆಯ ಪಾದಕರಿಶಿಣವ ಹಚ್ಚುವೆನು
ಪದ್ಮ ಸಂಭವನ ಪಿತ ವೆಂಕಟೇಶ ಶ್ರೀಶ ಅ.ಪ.
ಪಣೆ ತೋರು
ವರ ಕುಂಕುಮದ ತಿಲಕ ತಿದ್ದುವೇನು ಕೃಷ್ಣ
ಕೊರಳ ತೋರೆಲೊ ದೇವ ಶ್ರೀ ವತ್ಸದಾಮೇಲೆ ಮೆರೆವ
ತೆರ ಹಾರಹಾಕುವೆನೀಗ ಶ್ರೀಶಾ ಸುರವಂದ್ಯನೆ ದೇವ ಶ್ರೀನಿವಾಸ 1
ವೇದಾಭಿಮಾನಿಯೆ ವೇದದಿಂದಮುತ್ರವನು
ಆದರದಿ ಭಕ್ತರಿಗೆ ಕೊಟ್ಟಿ ಕರಕೆ
ಮೋದದಿಂದ ಗಂಧವನು ಹಚ್ಚುವೆನು ಎಲೊ ದೇವ
ಸಾಧಿಸಿ ಭೂಮಿಯ ತಂದ ವರಹ ಕಂಠವ ತೋರೋ
ಆದರದಿ ಹಚ್ಚುವೆನು ದೇವ ದೇವ 2
ಕಂದನಾ ನುಡಿಕೇಳಿ ಕಂಬದಿಂ ಬಂದವನೆ
ಅಂದದಿಂ ಬ್ರಹ್ಮಚಾರಿಯಾಗಿ ಮೆರೆವ ದೇವ
ಸುಂದರ ಪರಶುರಾಮ ಅಂದದ ದಶರಥಸುತನೆ
ಮಂದರೋದ್ಧರ ಕೃಷ್ಣ ಸುಂದರ ಬೌದ್ಧ ಕಲ್ಕಿ ನಿನ್ನ
ಮಂದಗಮನೆಯ ವೀಳ್ಯ ಸ್ವೀಕರಿಸೊ ಶ್ರೀ ಶ್ರೀನಿವಾಸಾ 3