ಎಂದಿಗೆನಗೆ ಬುದ್ಧಿ ಬಂದಿತೋ ಹರಿಯೆ
ಇಂದೀವರಾಕ್ಷ ನೀನೆ ಗತಿ ದೊರೆಯೆ ಪ.
ಕಣ್ಣಿದಿರಲಿ ಕಂಡು ಕಾಲಗತಿಗಳನ್ನು
ತನ್ನ ಸಂಸ್ಥಿತಿ ಮುಂದೆಂತಾಹುದನು
ಚೆನ್ನಾಗಿ ಗ್ರಹಿಸದೆ ಚಪಲ ಚಿತ್ತದಿ ಗೃಹ
ಸನ್ಮಹದಲಿ ಮನವನಿಟ್ಟು ಬಳಲುವೆ 1
ಸಾಗದ ಕಾರ್ಯವ ಸುಲಭವೆಂದೆಣಿಸಿದ-
ರಾಗದು ಹಗಲಿರಳೊರಳಿದರು
ನಾಗಶಯನ ನೀನು ನಿರ್ಣಯಿಸಿದ ರೀತಿ
ಯಾಗುವದೆಂಬುದನರಿಯದೆ ಮರುಳಾದೆ 2
ಇಂತಾದ ಮ್ಯಾಲೆ ಶ್ರೀಕಾಂತ ನೀ ದೊರಕುವ-
ದೆಂತು ಸಂಘಟ್ಟಿಪದೋ ನಾನರಿಯೆ
ಕಂತುಜನಕ ವೆಂಕಟೇಶನೆ ಮಾನಸ
ಭ್ರಾಂತಿಯ ಬಿಡಿಸು ನಿಶ್ಚಿಂತೆಯಿಂದಿರಿಸ 3