ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಟಕವಿದು ಹಳೆ ನಾಟಕ ನೋಟಕೆ ಇದು ಬಲು ನೂತನ ಪ ನಾಟಕ ಮಂದಿರ ಜಗವೆಲ್ಲ ಕಂಡಿರ ನೋಟವು ಯಾರದೊ ಆಟವು ಯಾರದೊ ಅ.ಪ ಇರುಳೊಳು ರಾಜಾಧಿರಾಜನಿವ ಹಗಲಲಿ ಭಿಕ್ಷಕೆ ಹಾಜರಿವ ಮುಗಿವುದು ಎನ್ನಯ ಪಾತ್ರವೆನ್ನುವುದೆ ಹಗಲಿನತನಕವು ಕಾಣನಿವ 1 ಯುದ್ಧವು ದಿನವೊ ಈ ನಾಟಕದಿ ಗೆದ್ದವರೊಬ್ಬರ ತೋರಿಸಿ ಯುದ್ಧದಗೋಚಿಗೆ ಹೋಗದೆ ಶಾಂತಿಯೊ ಳಿದ್ದ ಜನರೆ ಗೆದ್ದವರಿಲ್ಲಿ 2 ಕಲಿಪುರುಷನ ದೊಡ್ಡ ಸಭೆಯಲ್ಲಿ ಕುಳಿತು ಮಾತಾಡುವರಾರು ಜನ ಕಳುಹಿಸಲೊಬ್ಬನು ಇಳೆಯೊಳಗೊಬ್ಬರ ಉಳಿಸದೆ ಗೆಲುವೆನು ನೋಡು ಪ್ರಭು 3 ಶೌರ್ಯ ಸಾಹಸ ಕಾಪಟ್ಯಗಳಾ ಶ್ಚರ್ಯವು ಒಂದೊಂದು ದೃಶ್ಯದಲೂ ಯಾರ್ಯರೆಂಬುದ ಕಾಣದೆ ವೇಷದ ಮರ್ಯಾದೆಯು ವರ್ಣಿಪುದೆಂತು 4 ಕುಣಿವರು ಒಂದೆಡೆ ದಣಿವರು ಒಂದೆಡೆ ಕೊನೆ ಮೊದಲಿಲ್ಲವೀ ನಾಟಕಕೆ ಪ್ರಣಯಹನನ ದೃಶ್ಯಗಳನು ಒಂದೇ ಕ್ಷಣದಲಿ ತೋರುವ ಅಸದೃಶ್ಯದ 5 ಹೊಸ ಹೊಸ ದೃಶ್ಯವು ಹೊಸ ಹೊಸ ಪಾತ್ರವು ಪುಸಿಯಲ್ಲವು ಈ ನಾಟಕವು ಶಶಿಕುಲದರಸ ಪ್ರಸನ್ನನಾಗಿ ತಾ ಮುಸಿ ಮುಸಿ ನಗುತಲಿ ನೋಡುತಿಹ 6
--------------
ವಿದ್ಯಾಪ್ರಸನ್ನತೀರ್ಥರು