ಶ್ರೀ ವಿಷ್ಣು ತೀರ್ಥರು
ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ಪ
ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ
ಬಡವರಂತತಿ ಬಾಯ ಬಿಡುವರಲ್ಲವರು ಅ.ಪ
ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು
ಮುಂಚೆ ತಿಳಿವರು ಈ ಪ್ರಪಂಚದಲ್ಲಿ
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು
ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು 1
ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು
ಅಂಗದಲಿ ಸುರಿವರು ಕಂಗಳೊದಕವ
ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ
ಮುಂಗೈಯ್ಯ ಮುದ್ರೆಗಳ ಧರಿಸುವರಿವರು 2
ವಾಸುದೇವನ ದಾಸ ದಾಸರಾದೆವೆಂಬೊ
ಆಶೆಯಲಿ ಅವನ ಸಹವಾಸ ಬಯಸುವರು
ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು 3