ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ