ಕಂಡಿರ ಮಧುರ ನಾಥನ
ಕಂಡವರು ಪೇಳಿ ದಮ್ಮಯ್ಯ ಪ
ದುಂಡು ಮುಖದ ಮೋಹನಾಂಗನು
ಕೊಂಡು ಪೋದನೆಮ್ಮ ಮನವ ಅ.ಪ
ಮಲ್ಲಿಗೆ ತುಳಸಿ ಮಾಲತಿ
ಎಲ್ಲಿ ಪೋದನು ಪೇಳಿ ಕೃಷ್ಣನು
ವಲ್ಲಭನ ಚರಣಗಳಲಿ ನಿಮ್ಮನು
ಸಲ್ಲಿಸಿದ ಹಂಗೆಮ್ಮೊಳಿದ್ದರೆ 1
ತೋರಿದೆರೆ ನಯನಾಭಿರಾಮನ
ಸೇರುವೆ ಅವನಂಘ್ರಿಯುಗಳಕೆ
ಭೂರಿ ತರದುಪಕಾರ ನಿಮಗೆ ಸ
ತ್ಕಾರ ಬರುವುದು ವಿಧಿಭವರಿಂದ 2
ಪದ್ಮೆಯರಸನು ನಿಮ್ಮೊಳಿರುವ
ಸುದ್ದಿ ಬಲ್ಲೆವು ತೋರದಿದ್ದರೆ
ಪದ್ಮಸಂಭವ ಪಣೆಯ ಬರಹವ
ತಿದ್ದಿ ಪೇಳಿರಿ ಪದ್ಮಗಳಿರ 3
ಪಾರಿಜಾತ ಸುಜಾತ ನಂದಕು
ಮಾರ ಮಣಿಯೊಂದನು ಕೊಡಲಾರೆಯ
ಹೇರು ವಿಧ ವಿಧ ರತ್ನ ಮಣಿಗಳ
ಸೂರೆಗೈವ ಅಭೀಷ್ಠಪ್ರದಾತ 4
ಕೇಳಲೇನುಪಯೋಗವಿವರು
ಪೇಳಲಾರರು ಸುದ್ದಿ ಎಮಗೆ
ತಾಳಲೆಂತು ಪ್ರಸನ್ನ ಕೃಷ್ಣನೆ
ಕೇಳೆಲೆಮ್ಮಯ ಮೊರೆಯ ದಯದಿ 5