ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ನಾಮದಲಡಗಿದವೊ ಅಡಗಿದವೋ ಆಪ ಅಖಿಳ ವೇದಗಳು ಅ ಪ ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು 1 ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2 ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ 3
--------------
ವಿಜಯದಾಸ
ನಾರಾಯಣ ಪರಿಪಾಹಿ-ನರಹರಿಯೆ ಪ ನಿನ್ನೊಳು ನಿರುತನಾನಪರಾಧಿ ನಾರಾಯಣ ಅ.ಪ ಹೇಸಿಕೆಯಿಂದ ಮನಕಾಸುವೀಸಕೆ ಸೋತು ಮೋಸಹೋದೆ ನಿನ್ನ ನೆನೆಯದೆ ಕೇಶವ 1 ನಿರುತ ನಿನ್ನಯ ನಾಮಸ್ಮರಣೆಯ ಬಿಟ್ಟು ಘೋರನರಕಕ್ಕೆ ಗುರಿಯಾದೆ ಪೊರೆಯೊ ನಾರಾಯಣ2 ಮುದದಿಂದ ನಾ ಹದಿಬದೆಯರ ಮುಖನೋಡಿ ಮದದಿಂದ ನಿನ್ನನು ಮರೆದೆನೊ ಮಾಧವಾ3 ಸವನತ್ರಯದಿ ಅವ್ಯವಹಿತ ಕಾರ್ಯವ ಲವಲೇಶ ಬಿಡದೆ ನಾನೆಸಗಿದೆನೋ ಗೋವಿಂದ 4 ಕ್ಷಣ ಬಿಡದಲೆ ದುಷ್ಕರ್ಮದಿಂದಲಿ ದಣಿದು ತೃಣಕೆಣೆಯಾಗಿ ನಿರ್ವಿಣ್ಣನಾದೆ ಹೇವಿಷ್ಣು 5 ಹೃದಯದೊಳಿಲ್ಲದ ಮಧುರ ನುಡಿಗಳ ಮುದದಿ ನುಡಿದೆನೋ ಮಧುಸೂದನನೇ 6 ಅವನಿಯೊಳಗೆ ಎನಗೆಣೆಯಿಲ್ಲವೆನುತ ಅವಗುಣಪ್ರತಿಮೆ ನಾನಾದೆ ತ್ರಿವಿಕ್ರಮ 7 ಅನುದಿನ ನಿಂದಿಸಿ ಯಮನ ಮಂದಿರದಿ ನಾ ನಿಂದೆನೊ ವಾಮನ8 ಬುಧನೆಂದು ಮೆರೆದು ನಾ ಆಧಮರಸೇವಿಸಿ ಅಂಧತಮಕೆ ಗುರಿಯಾದೆನೋ ಶ್ರೀಧರ 9 ವಿಷಯವೆ ಜೀವನದ ಕೃಷಿಯಾಯಿತೆನಗೆ ತೃಷೆಯ ಮೀರದೆ ನಿನ್ನ ಮರೆದೆನೊ ಹೃಷಿಕೇಶನೆ 10 ಉದುಭವಿಸಿದೆ ಈ ವಸುಧೆ ಭಾರಕ್ಕಾಗಿ ಬಾಧಕನಾದೆನೊ ಪದುಮನಾಭನೆ 11 ತಾಮಸಕೃತ್ಯದಿಂದುದರ ಪೋಷಣೆಗಾಗಿ ಪ್ರೇಮದಿ ತಿರುಗಿದೆ ದಾಮೋದರ ದೇವ 12 ಶಂಕೆಯಿಲ್ಲದ ದುರುಳಕಿಂಕರಸೇವೆಯಿಂದ ಸಂಕಟಪಟ್ಟೆನೊ ಸಂಕುರುಷಣ ದೇವ 13 ಕಾಸಿನಾಶೆಗೆ ನಾ ಹೇಸಿಕಿಲ್ಲದೆ ಮನ ಹೇಸದೆ ಯಾಚಿಸಿದೆ ವಾಸುದೇವನೇ 14 ಸದ್ಯಫಲವೆ ಮುಖ್ಯವು ಉದ್ಯೋಗವೆಂದು ಉಬ್ಬಿ ಒದ್ಯಾಡುತಿಹೆ ಪ್ರದ್ಯುಮ್ನದೇವನೆ15 ಸತಿ ಅನುಗಾಲ ಬಂಧು ಎಂದು ಅನವರತ ನಂಬಿದೆನು ಅನಿರುದ್ಧದೇವನೆ 16 ಪರಿಪರಿ ಕ್ರೀಡೆಯಿಂ ಪರಪೀಡಕನಾಗಿ ಪರರನು ಸ್ತುತಿಸಿ ಬೆಳೆದೆ ಪುರುಷೋತ್ತಮ17 ಸಾಧು ಸಜ್ಜನರೊಳು ಭೇದ ವಂಚನೆ ಮಾಡಿ ಅಧೋಕ್ಷಜ ಮೂರ್ತೇ 18 ಬಾರಿಬಾರಿಗೆ ಪರಾನ್ನವನುಂಡು ಘೊರ ದುರಿತಕ್ಕೆ ಗುರಿಯಾದೆ ಶ್ರೀ ನರಸಿಂಹನೇ19 ಕೆಚ್ಚೆದೆಯಿಂದ ನಾನು ಸ್ವೇಚ್ಛೆಯಿಂದಲಿ ಚರಿಸಿ ಹುಚ್ಚು ಹಿಡಿದಂತಾದೆ ಅಚ್ಯುತಮೂರ್ತೇ20 ಮಾನಿಗಳಿಗೆ ಅವಮಾನ ಮಾಡಿ ನಾ ಜ್ಞಾನಿ ಎಂದೆನಿಸಿದೇ ಜನಾರ್ದನನೇ ಕಾಯೊ 21 ಕೋಪತಾಪಗಳಿಂ ಪಾಪಕೃತ್ಯವೆಸಗಿ ತಾಪ ಪಡುತಲಿಪ್ಪೆನಯ್ಯ ಉಪೇಂದ್ರನೆ 22 ಕರಚರಣಗಳಿಂದ ಕಳ್ಳನಾಗಿಹೆನು ತೊರೆದೆನೊ ಹರಿಗುರು ಯಾತ್ರೆಯ ಶ್ರೀಹರೇ 23 ಶಿಷ್ಟರನ್ನೆಲ್ಲ ನಿಕೃಷ್ಟತನದಿ ನೋಡಿ ಭ್ರಷ್ಟನಾಗೀಜಗದಿ ಮೆರೆದೆ ಶ್ರೀಕೃಷ್ಣನೇ 24 ಸಂಕಟಪಡುತಿಹ ಕಿಂಕರನೊಳಿಹ ಮಂಕು ಹರಿಸಿ ಕಾಯೋ ಶ್ರೀ ವೇಂಕಟೇಶನೇ25
--------------
ಉರಗಾದ್ರಿವಾಸವಿಠಲದಾಸರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು