ಈ ನೀಚಮನಸಿಗೆ ಮಾಡಲಿನ್ನೇನು
ಥೂ ನಾಚಿಕಿಲ್ಲದಕೆ ಉಪಾಯವೇನು ಪ
ಹರಿಚರಣ ಸ್ಮರಿಸುವುದು ಹರಿದಾಟ ಮರಿವಲ್ಲದು
ಪಿರಿದುನುಡಿಯಾಡುವುದು ಕಿರಿಗುಣವ ಬಿಡದು
ಪರಲೋಕ ಬಯಸುವುದು ನಿರುತದಿಂ ನಡಿವಲ್ಲದು
ಶರಣರೊಡನೆನದಿಹ್ಯದು ಪರನಿಂದೆ ಬಿಡದು 1
ಜ್ಞಾನನುಡಿ ಪೇಳುವುದು ನಾನೆಂಬುದಳಿವಲ್ಲದು
ಧ್ಯಾನದೊಳಗಿರುತಿಹ್ಯದು ಶ್ವಾನಕಲ್ಪನ್ಹಿಂಗದು
ದಾನಗುಣ ಬೋಧಿಪುದು ಜೀನತ್ವ ತೊರಿವಲ್ಲದು
ಆನಂದ ಬೇಡುವುದು ಹೀನಭ್ರ್ರಾಂತಿ ಬಿಡದು 2
ಸಾದುಪಥದಾಡುವುದು ಭೇದ ಕಡಿವಲ್ಲದು
ವೇದಾಂತ ಕೇಳುವುದು ಸಾಧನಕೆ ಒಲ್ಲದು
ಪಾದಭಕ್ತಿ ಬೇಡುವುದು ಕ್ರೋಧ ತೊಡಿವಲ್ಲದು 3
ನಾಮಭಜನೆ ಮಾಡುವುದು ತಾಮಸವ ತುಳಿವಲ್ಲದು
ಸ್ವಾಮಿಯೊಲುಮೆ ಕೋರುವುದು ಪಾರತ್ವ ಬಿಡದು
ಕಾಮಿತೊಲ್ಲೆನೆನ್ನುವುದು ಭಾಮೆ ಭೂಮಿಪ್ರೇಮ ಬಿಡದು
ಕ್ಷೇಮ ಸದಾ ಬೇಡುವುದು ನೇಮನಿತ್ಯ ಒಲ್ಲದು 4
ಶಾಸನವ ಪೇಳುವುದು ತಾಸು ಸ್ಥಿರ ನಿಲ್ಲದು
ನಾಶಜಗವೆನುತಿಹ್ಯದು ಕಾಸು ಒಲ್ಲೆನ್ನದು
ದೋಷನಾಶನ ಜಗದೀಶ ಶ್ರೀರಾಮನಡಿ
ದಾಸನಾನೆಂಬುವುದು ವಾಸನೆಯ ಬಿಡದು 5