ಒಟ್ಟು 25 ಕಡೆಗಳಲ್ಲಿ , 14 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುವೇ ಸಾಧಕ ವೃತ್ತಿಗಳು | ಇದೇ ಅಬಾಧಕ ಯುಕ್ತಿಗಳು ಪ ಸದ್ಗುರು ಪಾದಕ ಸದ್ಭಾವದಿ ನಂಬಿ | ಹೃದ್ಗತ ಗುಜವನು ಪಡೆದಿಹನು | ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ | ಉದ್ಗಾರ ಪ್ರೇಮದ ಮಾಡುವನು 1 ಬಲ್ಲವನು ಕಂಡೆರಗಿ ಸಿದ್ಧಾಂತದಾ | ಉಳ್ಳಸದ್ಭೋಧವ ಕೇಳುವನು | ಮೆಲ್ಲನೆ ಮನನದಿ ಧ್ಯಾಸವು ಬಲಿಯುತ | ಕ್ಷುಲ್ಲರ ಮಾತಿಗೆ ಮನ-ವಿದನು 2 ಅನ್ಯರ ಸದ್ಗುಣ ವಾರಿಸಿ ಕೊಳುತಲಿ | ತನ್ನವಗುಣಗಳ ಜರಿಸಿದವನು | ಸನ್ನುಡಿ ಬಿರುನುಡಿಗಳಕದೆ ಕುಜನರ | ಮನ್ನಿಸಿ ಶಾಂತಿಯನು ಜಡಿದಿಹನು 3 ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ | ತಿದ್ದುದರಂದದಿ ತಿದ್ದುವನು | ಇದ್ದಷ್ಟರೊಳಗೆ ಸಾರ್ಥಕದಲಿ ದಿನ | ಗದ್ದಿರ ಹೊರಿಯಲು ಉದರವನು 4 ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ | ಗರ್ವವ ತ್ಯಜಿಸಿಹ ಜನರೊಳಗೆ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು | ಅರ್ವವ ಜಗಸನ್ಮತನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇ ನೋಡಿ ನಿಜ ಉಪಾಯ ಸದಮಲ ಸುಖದಾಶದಾಶ್ರಯ ಧ್ರುವ ಸಾಧನವಿಲ್ಲಿದೆ ಶ್ರೇಯಸುಖ ಬ್ಯಾರದೆ ಕೇಳತಿಸೂಕ್ಷ್ಮ ಮಾತು ಭೇದಿಸಿ ನೋಡೇನೆಂದರೆ ತಿಳಿದೀತು ಸಾಧಿಸಿ ಕೈಗೊಟ್ಟಿತು 1 ಗೋವಗೋಂತಲ್ಲದೆ ಬ್ಯಾರೆದೆ ಘನ ಭಾವಿಸದೆ ನಿಜಖೂನಾ ಸಾವಧವಾದವಗಿದೇನಿಧಾನ ಭವಹರ ಗುರುಕರುಣಾ 2 ತಾನೆಂಬುದರೊಳು ತಾನೆತಾನಾಗೇದ ಭಾನುಕೋಟಿ ಉದಿತ ದೀನ ಮಹಿಪತಿಸ್ವಾಮಿಯು ಸಾಕ್ಷಾತಾನಂದ ಘನಭರಿತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ನರ ಪಶು ಕಾಣಿರ್ಯೋ | ಇದೇ ಮನದ ಸ್ಥಿತಿ ನೋಡಿರ್ಯೋ ಪ ಉದಯದಲೇಳುತ ಉದರದಿ ಧಾವತಿ | ಉದರ ತುಂಬಲು ನಿದ್ರಿಯ ಭರವು | ಮದದಲಿ ಭಯ ಕೊಟ್ಟಿಗೆಯಲಿ ಮಾಯದ | ಸದಮಲ ಪಾರದ ಬಂಧನವು 1 ಸಂಚಿತ ನೊಗ ಹೆಗಲಲಿ ಪೊತ್ತು | ಘನ್ನದುರಿತ ಘಸಣೆಯ ತಳೆದು | ತನ್ನ ಹಿತಾ ಹಿತ ಲೇಶವ ನರಿಯದೆ | ಕಣ್ಣೆವೆಯಿಕ್ಕದೆ ಡೋಕುವನು 2 ಗುರುವರ ಮಹಿಪತಿ ನಂದನ ಸ್ವಾಮಿಯು | ಹೊರೆವ ವಡಿಯನೆಂಬ ಗುರುತರಿದೇ | ಅನುದಿನ ಕಾವವ | ಸಿರಿಯ ಮದಾಂಧನ ನಂಬಿಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ ಐಹಿಕ ವಸ್ತುವೀವುದು ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ - ತಂತ್ರನು ಇಹಪರದಿ ಐಶ್ವರ್ಯವ 1 ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ ಸುಖಜ್ಞಾನಮಯ ದೋಷದೂರ ಗುಣನಿಧಿಯು 2 ಮಮಕಾರ ಅಹಂಕಾರ ಡಂಭತನವನು ಬಿಟ್ಟು ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು ಸುಮನಸಾರ್ಚಿತ ಕುಸುಮಸಂಭವನ ತಾತನು ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ 3
--------------
ಪ್ರಸನ್ನ ಶ್ರೀನಿವಾಸದಾಸರು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ನನ್ನ ಸ್ವಾಮಿಯು ನೀನಲೆ ಪ ನನ್ನನುದ್ಧರಿಪುದು ನಿನ್ನದಾಗಿರಲಯ್ಯ ಅ.ಪ ನಿನ್ನ ಚರಿತೆಯ ಕೇಳಲಿ ಕಿವಿ ನಿನ್ನನೀಕ್ಷಿಸಲೆನ್ನ ಕಂಗಳು ನಿನ್ನ ಪೂಜಿಸಲೆನ್ನಕೈಗಳು ನಿನ್ನ ಹೊಗಳಲೆನ್ನ ರಸನೆಯು 1 ತಂದೆ ನೀನೆನ್ನತಂದೆ ನಾನು ಅದರಿಂದ ಬಂದೆ ನಿನ್ನಯ ಹಿಂದೆ ಮುಂದೆ ಪೋಗುತಲಿ ಒಂದೆ ನಿಮಿಷದಲಿ ಕಂದನೆನ್ನಿದಿರಿಂದ ಮರೆಯಾದೆ 2 ಅಂದಿನಿಂದ ಮುಕುಂದ ನಿನ್ನರವಿಂದಚರಣದ್ವಂದ್ವ ವಿರಹದಿ ನೊಂದು ನಿಂದೆಡೆನಿಲ್ಲದಲೆವೆನೋ ತಂದೆ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪದ್ಮನಾಭ ವಾಕು ತಾನೂ ಮೊದಲುನಾದರೂಪದಿ ತೋರಿ ನಾಲ್ಕು ವಿಧದಿಪಾದವೆರಡು ಪರಾ ಪಶ್ಯಂತಿಯೆಂದುಭೇದದಿ ಮಧ್ಯಮ ವೈಖರಿಯೆರಡಿಂ ಪಾದೀ ಸರಿಗಮಪದನಿ ಯದೆನಿಪ 1ಶ್ರುತಿಗಳ ಸಂಜ್ಞೆುಂದ ಸಾರಾವಾದಾ ಸ್ವರದತತಿಯಾಗಿ ಸೋಪಾನವ ತಾನು ಸೇರುತಗತಿುಂದಲೇರುತಿಳಿದು ಗುಣಗಳಿಂದಲೆಸತತವು ಷಡ್ಜಗಳೇಳನು ಸೂಚಿಸಿ ಮತದಲಿ ನಿನ್ನಯ ಮಹಿಮೆಯ ಪೇಳ್ವ 2 Éೂೀಕವೀರೇಳರಲ್ಲಿ ಲೀಲೆುಂದ ನೀನುಸೋಕಿ ಸೋಕದ ಹಾಗೆ ಸಂಚರಿಪುದವಾಕೊಂದೆ ಬಹಳ ಶಬ್ದವೆನಿಸಿಕೊಳುತಏಕನು ತಿರುಪತಿಯೊಡೆಯನನೇಕದಿ ಸಾಕುವ ವೆಂಕಟಸ್ವಾಮಿಯುಯೆನುವಾ 3ಓಂ ಉತ್ತಾಳೋತ್ತಾಳ ಭೇತ್ತ್ರೆ ನಮಃ
--------------
ತಿಮ್ಮಪ್ಪದಾಸರು
ಪ್ರಸನ್ನ ಶ್ರೀ ವೇದವ್ಯಾಸ ಪ್ರಥಮ ಆಧ್ಯಾಯ ಪ್ರಾದುರ್ಭಾವಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ನಾರಾಯಣ ಸರ್ವ ಉರು ಗುಣಾರ್ಣವ ನಮೋ ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ 1 ವಾಸುದೇವ ವೈಕುಂಠ ನಮೋ ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ 2 ಕೂರ್ಮ ಕ್ರೋಢ ನರಸಿಂಹ ವಾಮನ ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ ಆನಂದ ಜ್ಞಾನಾದಿ ಗುಣಮಯ ರೂಪಗಳು ನಿತ್ಯ 3 ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು ಕೃತಿ ನಡೆಸಿ ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ 4 ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ 5 ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ ಇಳೆಯಲಿ ಸುಜನರಲಿ ಕಡಿಮೆ ಆಗಿ ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು 6 ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು ದೇವ ದೇವೋತ್ತಮ ನೀ ಅಭಯವನಿತ್ತು ಭುವಿಯಲಿ ಪರಾಶರ ಸತ್ಯವತಿ ಸುತನೆಂದು ಅವತಾರ ಮಾಡಿದಿ ಸಜ್ಜನೋದ್ಧಾರ 7 ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು ಅಜ ನೀ ತನ್ನಲವತರಿಸು ಎಂದು 8 ವೇದ ವೇದಾಂಗ ಕೋವಿದ ಪರಾಶರರ ಶ್ರದ್ಧೆ ಶೀಲತ್ವವ ಮೆಚ್ಚಿ ನೀನು ಪೇಳ್ದಿ ವಸುರಾಜನ ಸುತೆ ಸತ್ಯವತಿಯ ಸುತನೆನಿಸಿ ಅವತಾರ ಮಾಡುವಿ ಎಂದು 9 ವಸುರಾಜ ಅಡವಿಯಲಿ ಬೇಟೆಯಾಡುವಾಗ ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ ವಿಸರ್ಜನೆ ಆಯಿತು ರೇತಸ್ಸು ಅದನ್ನ ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ 10 ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ- ಶೇನಪಕ್ಷಿ ತಡೆದು ಯುದ್ಧ ಮಾಡಿತು 11 ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು 12 ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ 13 ಮತ್ಸದ ಗರ್ಭವು ವರ್ಧಿಸಿತು ಆಗ ಬೆಸ್ತರು ಆ ಮೀನ ಹಿಡಿದು ಸೀಳೆ ಅದರ ಉದರದಿ ಎರಡು ಶಿಶುಗಳ ಕಂಡರು ಒಂದು ಹೆಣ್ಣು ಮತ್ತೊಂದು ಮಗು ಗಂಡು 14 ತಮ್ಮ ನಾಯಕ ದಾಸರಾಜನಲಿ ಪೋಗಿ ಆ ಮೀನುಗಾರರು ಶಿಶುಗಳ ಕೊಡಲು ಆ ಮತಿವಂತನು ವಸುರಾಜನಲಿ ಪೋಗಿ ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ 15 ವಸುರಾಜನು ವಿಷಯವ ಚೆನ್ನಾಗಿ ಅರಿತು ಶಿಶುಗಳು ತನ್ನದೇ ಎಂದು ತಿಳಿದು ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ 16 ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ ಬೆಳೆಯುತಿಹಳು ದಾಸರಾಜನ ಗೃಹದಿ ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು ಬಲು ಪುಣ್ಯವಂತಳು ಸುಶುಭ ಲಕ್ಷಣಳು 17 ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ ದಾಸನು ನಾವಿಗನು ಆದ್ದರಿಂದ ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ 18 ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ ಯಮುನೆಯ ದಾಟಲು ಹಡಗಿನಲ್ಲಿ ಕುಳಿತ ಆ ಮುನಿ ಪರಾಶರರಿಗೆ ಒದಗಿದಳು ಕಾಲ 19 ಶ್ರೀಶ ನಿನ್ನಯ ಮಾತು ನೆನೆದು ಪರಾಶರರು ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ ವಸುರಾಜನು ಧಾರೆ ಎರೆದಿತ್ತ ಮಗಳ 20 ನಾರದರ ವೀಣೆ ಸಂಗೀತ ಗಾಯನವು ಸುರ ಗಂಧರ್ವರ ಸುಸ್ವರ ಗಾನ ಸುರನಾರಿ ನರ್ತಕರ ಆನಂದ ನರ್ತನವು ಸರಸಿಜಾಸನ ಮುಖ ಸುರರ ಸ್ತೋತ್ರಗಳು 21 ನೀಲ ಮೇಘ ಶ್ಯಾಮ ಇಂದಿರಾಪತಿಯು ಕಲಿ ವಿದಾರಕ ವಿಜ್ಞಾನ ಭೋದಕನು ಇಳೆಯಲಿ ವ್ಯಾಸ ಅವತಾರ ಸಮಯವೆಂದು ಸುರರು ಕೂಡಿ ತುಂಬಿದರು 22 ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು ಮರಗದ ವರ್ಣದಲಿ ಜ್ವಲಿಸುವ ರೂಪ ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ ಸೂರ್ಯತೇಜಃ ಪುಂಜ ಅವತಾರ ಮಾಡಿದಿ 23 ಶೋಣಿತ ಸಂಬಂಧ ಇಲ್ಲವೇ ಇಲ್ಲ ಅಪ್ರಾಕೃತ ಚಿದಾನಂದ ಕಾಯ ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ ಶ್ರೀಕಾಂತ ನರಸಿಂಹ ಅವತಾರದಂತೆ 24 ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ ಅಂದು ಕಂಬದಿಂದ ಸ್ವೇಚ್ಛದಿ ಬಂದಿ ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ ಬಂದು ಪ್ರಕಟಿಸಿದಿ ವ್ಯಾಸ ಅವತಾರ 25 ಶೋಣಿತ ರಹಿತ ಅಲೌಕಿಕವಾದರೂ ನೀ ಲೋಕ ರೀತಿಯಲಿ ಪುಟ್ಟಿದ ತೆರದಿ ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ ಮಾಲೋಲ ನೀ ವಿಡಂಬನ ಮಾಡಿ ತೋರ್ದಿ 26 ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ ತಟಿತ್ ಪ್ರಭಾ ಜಟಾಮಕುಟ ಶಿರವು ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ 27 ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ ಇಷ್ಟಪ್ರದ ಅನಿಷ್ಟ ನಿವಾರಕ ನೋಟ ಕರ್ಣ ಕುಂಡಲದ್ವಯವು ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ 28 ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ ಸಂದರ್ಶನ ಸುಖ ಸಂದೋಹ ಈವುದು ಮಂದಹಾಸವು ನತಜನ ಶೋಕ ಕಳೆವುದು ಶುಭ ಲೋಹಿತೋಷ್ಟ್ರಗಳು 29 ಸುಂದರ ರೇಖಾತ್ರಯಯುತ ಕುಂಬುಗ್ರೀವದಿ ಕೌಸ್ತುಭ ಮಣಿಯು ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ ಚಿದ್ದಮಲ ಮೋದಮಯ ಶ್ರೀವತ್ಸ ಅಂಕ 30 ಪೊಳೆವ ರತ್ನದ ಹಾರಗಳು ಉರದೇಶದಲಿ ವಲಿತ್ರಯಾಂಕಿತ ಉಳ್ಳ ಉದರ ಸುಂದರವು ಕೀಲಾಲಜ ಭವಾಂಡವ ಪಡೆದ ನಾಭಿಯು ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ 31 ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು ಶ್ರೀಪ ನಿನ್ನಯ ದಿವ್ಯ ಯೋಗ ಅಸನವು ಉಪಮವಿಲ್ಲದ ಸುಂದರ ಕಟಿಜಾನು 32 ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂiÀರ್i ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ 33 ತಿಮಿರ ಮಾರ್ತಾಂಡ ನೀ ರವಿ ಕೋಟಿ ಅಮೃತ ಇಂದು ಕೋಟಿ ಅತ್ಯಧಿಕ ತೇಜ ಈ ದಿವ್ಯ ಸುರೂಪದಿ ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ 34 ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ ರೂಪ ಪೂಜೆ ಪರಾಶರರು ಮಾಡಿದರು ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ ಆ ಪರಾಶರ ಸತ್ಯವತಿಗೆ ಮುದಕರವು 35 ಸತ್ಯವತೀ ಪರಾಶರರ ಸುತನೆಂದು ನೀ ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ ಸಾತ್ಯವತೇಯ ಪರಾಶರ್ಯ ನಾಮದಿಂ ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ 36 ಯಾವ ಯಾವಾಗ ಸತ್ಯವತಿ ಪರಾಶರರು ದೇವತಾ ಸಾರ್ವಭೌಮನೇ ವ್ಯಾಸ ನಿನ್ನ ತಾವು ನೋಡಲು ಇಚ್ಛೈಸಿ ನೆನೆಯುವರೋ ಆವಾಗ ತೋರುವಿ ಎಂದಿ ಮಾತೆಗೆ 37 ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ ನಗ ಮೇರುಗಿರಿಗೆ ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ 38 ಜ್ಞಾನ ಸುಖಪೂರ್ಣ 'ಪ್ರಸನ್ನ ಶ್ರೀನಿವಾಸ' ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ ಆ ನಮಿಪೆ ಬದರೀಶ ಜ್ಞಾನಮುದ ಧನದ 39 - ಇತಿ ಪ್ರಥಮಾದ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ರಾಜ ರಾಜೇಶ್ವರನೇ ರಾಜೀವಾಲಯ ಪತೇ ರಾಜೀವಭವ ಭವಾದ್ಯಮರ ವಿನುತ ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ ರಾಜೀವನಯನ ಔದಾರ್ಯ ಕರುಣಾಬ್ಧಿ 1 ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ ಉತ್ಕøಷ್ಟ ಉಪದೇಶ ಮಾಡಿದಿ ಮೇರುವಿಲಿ 2 ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು ಸುಮಹಾ ವೇದಾರ್ಥ ನಿರ್ಣಯಕವಾದ ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ 3 ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ ಅಮಿತ ಬಲಯುತ ಶರದಿಂ ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ ಕ್ರೂರ ಕಲಿಮೃತನಾದವನಂತೆ ಆದ 4 ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ ಉದ್ಭೂತವಾದ ಉತ್ತಮ ಜ್ಞಾನ ರೂಪ ಸುಧೆಯ ದೇವತೆಗಳು ಭುಂಜಿಸಲು ಆಗ ವಿದೂರರಾದರು ಕಲಿಯ ಕಲ್ಮಷದಿಂದ 5 ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು ಬಂದ ರುದ್ರಾದಿಗಳು ಮುಂದೆ ಕುಳಿತು ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ- ಸೂತ್ರಾದಿ ಅಮೃತವ ಪಾನ ಮಾಡಿದರು 6 ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ ದೀನ ದಯಾಳು ನೀ ದಿಗ್ವಿಜಯಗೈದಿ ಮಂದಾಧಿಕಾರಿಗಳ ಉಪಕಾರಕಾಗಿ ನೀ ನಿಗಮ ವಿಭಾಗ ಮಾಡಿದಿಯೋ 7 ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ ಅವರು ವಾಸಿಸುವ ಸ್ಥಳಗಳಿಗೆ ಪೋಗಿ ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ ನಿವಾರಣ ಮಾಡಿದಿ ಕರುಣಾಂಬು ನಿಧಿಯೇ 8 ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ 9 ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ ಕರ್ಮ ನಿಮಿತ್ತ ನರ ನರೇತರ ಜನ್ಮ ಅಸಂಭವವು ಅಲ್ಲವು ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ 10 ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು ಆದರೂ ಆ ಕ್ರಿಮಿಗೆ ರಾಜಪದವಿತ್ತಿ 11 ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ 12 ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ ಮಗನೆಂದು ತಾ ಜನಿಸಿ ಸೇವಿಸಬೇಕೆಂದು ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ ಹಾಗೆ ನಿನ್ನಿಂದ ವರ ಪಡೆದು ಮಗನಾದ 13 ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ ರುದ್ರಗೆ ವರವಿತ್ತು ಅಧಮರ ಮೋಹಿಸಿದಿ ಒಂದೊಂ
--------------
ಪ್ರಸನ್ನ ಶ್ರೀನಿವಾಸದಾಸರು
ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ಪ ಗುಲ್ಲು ಮಾಡದೆ ಬೇಗ ನಿಲ್ಲೈಯ ಮನದಲಿ ಅ.ಪ ತಿರುಪೆ ಬೇಡಿದೆ ಯಾಕೆ ಪರಮ ಪುರುಷನು ಎನಿಸಿ ತುರುವ ಕಾಯ್ದೇಕೆ ಪರಿವಾರ ಸುರರಿರಲು ಕರಡಿಕಪಿಗಳ ಸೈನ್ಯ ನೆರವು ಯಾತಕೆ ನಿನಗೆ ಚರಿತೆ ಸೋಜಿಗವಯ್ಯಾ 1 ಅಷ್ಟಕರ್ತನಿಗೇಕೆ ಸಂತತವು ಜಪತಪವು ಪಟ್ಟ ಮಹಿಷಿಯರಿರಲು ಕುಬ್ಜೆಕೂಡಿದೆ ಯಾಕೆ ಉಟ್ಟು ಸೀರೆಯ ಖಳರ ವಂಚಿಸಿದ ಬಹು ಶೂರ ನಿಷ್ಟೆಯಿಂದಲಿ ಬಲಿಯ ಬಾಗಿಲನು ಕಾಯುವನೆ 2 ಬೆಣ್ಣೆ ಕಳ್ಳರ ಗುರುವೆ ಹೆಣ್ಣು ಕದ್ದವ ನೀನು ಮಣ್ಣು ಮಾಡಿದೆ ಕುಲವ ಯೆಂಜಲುಂಡವ ದೊರೆಯೆ ಅಣ್ಣ ತಮ್ಮಂದಿರಲಿ ಕಲಹವನು ವÀಡ್ಡುತಲಿ ನುಣ್ಣ ಗೆಲ್ಲರ ಮಾಡಿ ನಿಷ್ಕಪಟಿಯೆನಿಸಿದೆಯೊ 3 ಅನ್ಯರಿಗೆ ಉಪಕಾರಿ ಅನನ್ಯರಾ ಶತ್ರುವು ಭವ ಭ್ರಷ್ಟತ್ವ ನೀಡುವೆಯೊ ನಿನ್ನಾಳ ನಿಖಿಳರಿಗು ತೊರ್ಗೊಡದ ಬಹುಗೂಢ ಕಣ್ಣು ಕೈ ಕಾಲೆಲ್ಲ ಸಮವೇನೆ ನಿನಗಯ್ಯ 4 ದೊಡ್ಡ ದೇವನು ಎನಿಸಿ ಗುಡ್ಡವೇತಕೆ ಹೊಕ್ಕೆ ಗಿಡ್ಡರೂಪವ ತೋರಿ ದೊಡ್ಡದಾಗುತ ಎಂದು ಅಡ್ಡಿಯಿಲ್ಲದೆ ಬಲಿಯ ಹೆಡ್ಡನೆನಿಸಲು ಬಹುದೆ ಗುಡ್ಡೆಯಿಲ್ಲದೆ ಚರಿಪ ವಡಲು ಬಗೆದಾ ಘೋರ 5 ಪೂಡವಿಗೊಡೆಯನು ಎನಿಸಿ ಹಡೆದ ಮಾತೆಯ ಕಡಿದೆ ಅಡವಿ ಬೇರನು ತಿಂದೆ ಕಡಲೊಳಗೆ ಸಂಚರಿಪೆ ಮಡದಿಯನು ಕಳಕೊಂಡು ಹುಡುಕುತಲಿ ತಿರುಗಿದೆಯೋ ಸಡಗರದಿ ಹಯವೇರಿ ಕೆಡುಕು ಕಡಿಯುವೆಯಂತೆ 6 ನಾಮಕುಲಗೋತ್ರಗಳ ನೆಲೆಯಕಂಡವರಿಲ್ಲ ಸಾಮಸರಿ ನಿರ್ಗುಣವು ಪೂರ್ಣಗುಣ ನೀನಂತೆ ವಾಮನೀನಾವರಿಸಿ ವಳ ಹೊರಗೆ ಲೋಕಗಳ ನೇಮದಿಂ ಕಾಯುವನು ಪುಡುಕಿದರು ಸಿಗೆಯೇಕೇ 7 ಮಂಗಳಾಂಗನು ಅಂತೆ ಲಿಂಗವರ್ಜಿತನಂತೆ ಶೃಂಗಾರರಸನಂತೆ ಭಂಗರಹಿತನು ಅಂತೆ ಲಿಂಗವೆರಡೂ ಅಂತೆ ಸಿಸ್ಸಂಗ ನೀನಾಗಿ ಅಂಗದಲಿ ಅಂಗನೆಯ ಧರಿಸಿ ಮೆರೆಯುವೆಯೇಕೆ 8 ವೇದ ಬೋಧೆಯನಿತ್ತಗಾಧ ವರ್ಜಿತ ಮಹಿಮ ಮೋದ ಮಯ ನೀ ನಿನ್ನ ನಾದಿನಿಯ ಬೆರೆದೇಕೆ ಸಾಧುಗುಣಪೂರ್ಣ ಭಾನುವನು ಮರೆ ಮಾಡಿ ಮೈದುನನ ಸಲಹಿದ್ದು ಬಹುನ್ಯಾಯ ವೇನೈಯ್ಯ 9 ಹಾಲು ಕೊಟ್ಟವಳನ್ನು ಲೀಲೆಯಿಂದಲಿ ಕೊಂದೆ ಶೀಲಸತಿಯಳ ಬೆರದು ವ್ರತವಳಿದು ಪರವಿತ್ತೆ ಕಾಲನಾಮಕನಾಗಿ ಜಗವೆಲ್ಲ ನುಂಗುವನೆ ಹೇಳುವರು ಕೇಳುವರು ನಿನಗಿಲ್ಲವೇನೈಯ್ಯಾ 10 ಏನೆಂದು ವರ್ಣಿಸಲಿ ನಿನ್ನಯ ವಗತನವ ಸತಿ ಚಂಚಲೆಯು ಮಗಳ ಮಾರ್ಗವುಡೊಂಕು ಮಾನಾಭಿಮಾನಗಳ ಬಿಟ್ಟವರೆ ಪರಿವಾರ ನೀನಿರದಠಾವಿಲ್ಲ ನಿನಗಿಲ್ಲ ತುದಿಮೊದಲು 11 ಸರ್ವಜ್ಞನಾದವಗೆ ಸಾಂದೀಪ ಗುರುವೇಕೆ ಸರ್ವ ನಾಮವು ಕೂಡೆ ನಾಮಕರಣವು ಏಕೆ ಸರ್ವಸ್ವಾಮಿಯು ಎನಿಸಿ ಸಾರಥಿಯು ಆದೇಕೆ ಸರ್ವ ತೋಮುಖ ನೀನು ಜಗವಿಲಕ್ಷಣ ನೈಯ್ಯಾ12 ಒಬ್ಬರಲಿ ನೀಜನಿಸಿ ಮತ್ತೊಬ್ಬರಲಿ ನೀ ಬೆಳೆದೆ ತಬ್ಬಲಿಯೆ ವಾಸ್ತವದಿ ಉಬ್ಬಿಳಿತವರ್ಜಿತವೆ ಅಬ್ಬಬ್ಬ ಬ್ರಹ್ಮಾಂಡ ಹಬ್ಬಿ ನಡೆಸುವ ಧೀರ ಕೊಬ್ಬಿದಾ ಖಳಗಂಜಿ ಮಧುರೆಯನು ತೊರೆದೇಕೊ 13 ಮೇದಿನಿಗೆ ನೀ ಸ್ವಾಮಿ ಮದುವಾದೆ ಮಗಳನ್ನು ಬೈದವಗೆ ಗತಿಯಿತ್ತೆ ಭಕ್ತರಿಗೆ ಕೂಳಿಲ್ಲ ಮೋದ ಮಯ ನುಂಡುಣಿಸಿ ನಿರ್ಲೇಪನೀ ನಿರ್ಪೆ ವಿದುರ ನೌತಣ ಕೊಂಡೆ ಕನ್ಯೆಯಲಿ ನೀ ಬಂದೆ 14 ಜಯ ಮುನಿ ಹೃದಯದಲಿ ವಾಯುವಿನಂತರ ದಿರ್ಪ ಶ್ರೀಯರಸ ತಾಂಡವ ಕೃಷ್ಣವಿಠಲನೆ ನೀನು ಮಾಯಾವಿ ತೋರಗೊಡೆ ನಿಜಮರ್ಮಖಳಜನಕೆ ಜೀಯನೆ ಮೊರೆಹೊಕ್ಕೆ ನಿನ್ನಿರವ ತೋರೈಯ್ಯಾ 15
--------------
ಕೃಷ್ಣವಿಠಲದಾಸರು
ಮನಗೊಂಡವರಲ್ಲಿ ಘನಗೊಳ್ಳಿ ಜ್ಞಾನಾಗಮ್ಯದ ಧ್ರುವ ಮುನಿಜನರಾರಾಧಿಸುವ ನಿಧಾನ ಅನಿಮಿಷದಲಿ ನೋಡುವ ತ್ರಾಣ ಉನ್ಮನಲಿಹ ಧನ 1 ಜಾಣನೇ ಮಾಡಿಕೊಂಬನು ಪರೀಕ್ಷೆ ಸ್ವಾನುಭವದಲಿ ಪ್ರತ್ಯಕ್ಷ ಅನುದಿನದಲಿಹುದ ದಕ್ಷ ಘನಗುರು ಕಟಾಕ್ಷ 2 ಮಹಿಪತಿಸ್ವಾಮಿಯು ಪರಬ್ರಹ್ಮ ಖೂನಮಾಡವಗಿದು ಸಂಭ್ರಮ ಅನಂದೋಬ್ರಹ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಖ್ಯಕಾರಣ ವಿಷ್ಣು ಸ್ವತಂತ್ರನೆಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ ಪ. ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ 1 ಧ್ವನಿ ವರ್ಣಉಭಯ ಶಬ್ದದ ವಾಚ್ಯನು ನೀನೆಗುಣದೇಶಕಾಲ ಕರ್ಮದನು ನೀನೆತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ 2 ಹಯಾಸ್ಯ ಧನ್ವಂತ್ರಿ ವೃಷಭ ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು ಆದೆ ಕೃಪಾಳುವೆ ಶ್ರೀಶ 3 ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-ಚೇತನನು ಸರಿ ನೀನು ಸುಮ್ಮನಿರಲುಯಾತರವ ನಾನಯ್ಯ ನಿನ್ನಧೀನವು ಎಲ್ಲಚೇತನನಹುದೊ ನೀ ಚಲಿಸೆ ಚಲಿಸುವೆನು 4 ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆತಿಳಿಸೊ ಸೋತ್ತುಮರೆಲ್ಲ ತಿಳಿದ ಶೇಷತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿಚಲಿಸದಲೆ ಮನ ನಿಲಿಸೊ ಗೋಪಾಲವಿಠಲ 5
--------------
ಗೋಪಾಲದಾಸರು
ರಾಮನ ನಾಮವ ಪ್ರೇಮದಿ ಭಜಿಸಲು ರಾಮನು ವಲಿಯುವಾ ಬಿಡದೆ ಪಾಲಿಸುವಾ ಪ ಕಾಮಿತ ವರಗಳ ನೀಯುತ ಭಜಕರ ಸ್ವಾಮಿಯು ವಲಿದೆಮ್ಮ ನಿರುತ ಪಾಲಿಸುವಾ ಅ.ಪ. ತರಳರ ಮಾತಿಗೆ ಸೈಯೆಂದು ನುಡಿಯುತ್ತ ಪರಮ ಸಾಮ್ರಾಜ್ಯದ ಪದವಿಯ ಕೊಡುತ್ತಾ ಸರಳರ ಹೃದಯವ ನೀಕ್ಷಿಸಿ ಜವದೊಳು ಕರೆದು ಸಾಯುಜ್ಯದ ಪದವಿಯ ಕೊಡುವಾ 1 ದುರುಳರ ಸುಖಗಳಿಗಂತಕನಾಗುತ ಶರಣರ ಪಿಡಿದು ಶಿಷ್ಟರನು ಕಾಯುತ್ತ ಭರದಿಂದ ಸುಜನರ ಕಷ್ಟವ ತರಿವಾ 2 ಕೌಸಲೆ ಗರ್ಭದಿ ಬಂದ ಶ್ರೀಹರಿ ತಾನು ವಾಸುಕಿ ಭಾರವ ನಿಳುಹಲಿಕ್ಕೆ ವಾಸ ಮಾಡುವನೀಗ ವರ ದೂರ್ವಾಪುರದಲ್ಲಿ ದಾಸನ ಸಲಹುವ ಕೇಶವನೆಂಬ 3
--------------
ಕರ್ಕಿ ಕೇಶವದಾಸ
ಶ್ರೀ ಅಷ್ಟಾಕ್ಷರ ವಾಮನಮಂತ್ರ ಅಮಲ ಗುಣಪರಿಪೂರ್ಣ ಅಮೃತಸಖ ಚಿನ್ಮಯನೆ ವಾಮನ ಸುಮಂಗಳನೆ ನಮೋ ನಮೋ ನಮಸ್ತೆ ಪ ಅಮಿತ ಸುಂದರರೂಪ ಕಮಲಾದಿ ಸ್ತ್ರೀಯರಿಗು ಬ್ರಹ್ಮಾದಿ ಭಕ್ತರಿಗು ಸ್ವಾಮಿ ಸರ್ವಾಶ್ರಯನೆ ಅ ಪ ಸರ್ವದಾ ಸರ್ವತ್ರ ಸರ್ವ ಸ್ವಾಮಿಯು ನೀನು ಕೇವಲ ಸುನಿಷ್ಕಳನು ಸರ್ವ ಉತ್ಕøಷ್ಟ ಸರ್ವ ವೇದಾದಿಗಳಿಂ ಸರ್ವಜ್ಞ ನೀ ಜÉ್ಞೀಯ ಸರ್ವವಂದ್ಯನೆ ನಮೋ ಪ್ರಣವ ಪ್ರತಿಪಾದ್ಯ 1 ಉದಿತಭಾಸ್ಕರನಿಭ ಸ್ವಕಾಂತಿಯಲಿ ಜ್ವಲಿಸುವೆ ಸುದರ್ಶನವು ಶಂಖವು ಗದಾ ಜ್ಞಾನಮುದ್ರೆ ಪದುಮೆ ಸಹ ಸರ್ವ ಜಗದಂತರ್ಬಹಿವ್ರ್ಯಾಪ್ತ ಅಜ ಮಂತವ್ಯ ವಿಷ್ಣು 2 ಔದಾರ್ಯದಲಿ ಬಲಿಯ ಬೇಡಿ ಇಳಿಸಿ ಉಳಿಸಿ ಪಾದದಿಂದಲಿ ವಿಯದ್ಗಂಗೆಯನು ಪಡೆದೆ ಒದಗಿಸಿದೆ ಇಂದ್ರನಿಗೆ ಸ್ವರ್ಗಾಧಿಪತ್ಯವನು ಪದುಮಜನ ಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು