ನಾ ಮಾಡಿದತಿಶಯ ಅಪರಾಧ ಅಹಾ
ಸ್ವಾಮಿದ್ರೋಹವೆ ಮಾಡಿದೆ ಪ
ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ
ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ
ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ
ಸ್ಮರಿಸಬಾರದ ಸ್ತ್ರೀಯರ
ಶರಣಜನರು ಕಂಡು ಶಿರವ ಬಾಗದೆ ಮಹ
ಗರುವದಿಂ ಚರಿಸಿದೆ ಪರಿಪರಿ ಜಗದಿ 1
ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ
ಪಕ್ಷಿಗಮನನ ಸಾಕ್ಷಿಟ್ಟು
ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು
ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ 2
ಪಿತಮಾತೆಯರ ನೂಕಿ ಇತರರ ಜತೆಯೊಳು
ಮತಿಗೆಟ್ಟು ಮಮತಿಟ್ಟಿಹೆ
ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ
ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ 3
ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ
ಮನವ ನೋಯ್ಸಿದೆ ಬೆನ್ನ್ಹಚ್ಚಿ
ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ
ಮನಸಿನಂತ್ವರ್ತಿಸಿ ಘನಕರ್ಮಿಯಾದೆ 4
ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು
ಕಂತುಜನಕ ಶ್ರೀರಾಮ ಭಕ್ತವತ್ಸಲ
ನೆಂಬ ಬಿರುದು ವಹಿಸಿದಿ ಎನ್ನ
ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ 5