ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ ಕೊಳಲನೂದುವ ಬಗೆಯ ನಳಿನಜಾಂಡವು ತಾನೆ ತಲೆದೂಗುತಲಿದೆ ಕುಳಿತಿರೆ ವಶವಲ್ಲವೆ ಪ ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ- ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು ಲೋಲ್ಯಾಡದೆ ಬಿಡರು 1 ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು ಕಾಮತನಯ ಕಾಮದೇವ ಸೋಮಶೇಖರ ತಾನು ತಾಮರಸಾಸನ ಪ್ರೇಮಾದಿ ನಲಿಯುವ ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ ಸೇವೆ ಮಾಡುವರು 2 ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು ತೋರುವರಿಲ್ಲಿ ಆನಂದ ಈ ರಭಸದಿ ವೇಣು ಪೂರೈಸಿ ಸುಖವೀವ ಧೀರ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ ಪ ಧೇನಿಸು ಶ್ರೀಹರಿಯ ಲೀಲಾ ಸೃಷ್ಟಿ ಮಾನಸದಲಿ ನೆನೆಯೋ ಪರಿಯಾ ||ಆಹಾ|| ತಾನೆ ತನ್ನಯ ಲೀಲಾಜಾಲತನದಿ ತನ್ನ ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ಅ.ಪ ಮೂಲ ನಾರಾಯಣ ದೇವ ತಾನು ಆಲದೆಲೆಯೊಳು ಲೀಲಾ ತೋರಿ ಬಾಲತನದಿ ತಾ ನಲಿವಾ ಅನೇಕ ಕಾಲ ಪರ್ಯಂತರದಿ ಸರ್ವ ||ಆಹಾ|| ಎಲ್ಲ ಜಗವ ತನ್ನ ಒಡಲೊಳಡಗಿಸಿ ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ 1 ಇಂತು ಶಯನಗೈದ ಹರಿಯ ಅ- ನಂತ ವೇದಗಳಿಂದ ತ್ವರಿಯಾ ದುರ್ಗ ಸಂತಸದಿಂದ ಸಂಸ್ತುತಿಯ ಮಾಡೆ ಕಂತುಪಿತÀನು ತಾನೆಚ್ಚರಿಯ ||ಆಹಾ|| ಅಂತೆ ತÉೂೀರ್ದ ವಾಸುದೇವಾದಿ ಚತುರಾ- ಸಿರಿ ರೂಪಗಳ ಸಹಿತ 2 ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು ಸಕಲ ಮರುತರ್ಗೆ ತನುಮುಖ್ಯಾ ಇತ್ತು ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ|| ಲಕುಮಿಯ ಸ್ತುತಿಗೆ ಒಲಿದು ತಾನೇತ- ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ 3 ಶುದ್ಧಸೃಷ್ಟಿಯೆಂಬುದೊಂದು ಪರಾ- ಧೀನ ವಿಶೇಷವು ಎಂದು ಮತ್ತೆ ಒಂದು ಮಿಶ್ರ ಸೃಷ್ಟಿಯೆಂದು-ಒಂದು ಕೇವಲ ಸೃಷ್ಟಿಯೆಂದೂ ||ಆಹಾ|| ತಮಾಂಧಕಾರವ ಪ್ರಾಶಿಸಿದ ವಿವರಾ 4 ತನ್ನೊಳೈಕ್ಯವಾಗಿದ್ದ ಮಹ ತಾನೆ ಪ್ರಕಟನಾಗಿ ನಿಂದ ಆಗ ಉನ್ನಂತ ಚತುರ ನಾಮದಿಂದ ||ಆಹಾ|| ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ5 ಪುರುಷನಾಮಕ ಪರಮಾತ್ಮ ತಾ ತರವರಿತು ಘನಮಾಡ್ದ ಮಹಿಮಾ ಸೃಷ್ಟಿ ತರತರ ಮಾಡ್ದ ಮಾಹಾತ್ಮ ||ಆಹಾ|| ಪ್ರಾಕೃತ ವೈಕೃತ ದೇವತೆ ಸುಮಾನ ಈ ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ 6 ಮಹದಹಂಕಾರ ತತ್ವ ಪಂಚ ಮಹಭೂತಗಳು ಮನಸ್ತತ್ವ ಇನ್ನು ಮಹದಶೇಂದ್ರಯಗಳ ತತ್ವ ಮತ್ತೆ ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ|| ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು ಮುಹುರ್ಮುಹು ಇದನೆ ಆಲಿಸಿ ನಿನ್ನೊಳು 7 ವೈಕೃತದೋಳು ಸಕಲ ವೃಕ್ಷಾ ತಿರ್ಯಕ್ ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ|| ಸಕಲ ಸುರಾಸುರಪ್ಸರ ಗಂಧರ್ವರು ಪಿತೃಗಳು ಯಕ್ಷರಾಕ್ಷಸರ ಪರಿಯವರಾ 8 ಪುನ್ನಾಮ ವಿರಂಚಿ ಬ್ರಹ್ಮಾನು ಅಂದು ಘನ್ನವಾಸುದೇವ ತಾನು ಸೃಷ್ಟಿ ಯನ್ನ ಪ್ರಕಟಮಾಡಿದನು ಮುಂದೆ ಅನಿಲದೇವನು ಸಂಕರುಷಣನ ||ಆಹಾ|| ಅನಿಲನೆ ಸೂತ್ರನಾಮಕವಾಯುವಾಗಿಹ ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು 9 ಪ್ರದ್ಯುಮ್ನನಿಂದ ಸರಸ್ವತಿ ಇನ್ನು ಶ್ರಧ್ದಾನಾಮಕಳು ಭಾರತಿ ಸೃಷ್ಟಿ- ಯಾದ ವಿವರ ತಿಳಿಯೊ ಪೂರ್ತೀ ಇದೇ ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ|| ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ- ದುದ್ಭವಿಸಿದ ಜೀವ ಕಾಲನಾಮಕನು 10 ಈರ ಬ್ರಹ್ಮರಸೃಷ್ಟಿ ಚರಿತ್ರೆ ಚಿತ್ರ ಗಾತ್ರ ತರವೆಲ್ಲ ವಿಚಿತ್ರ ||ಆಹಾ|| ವಿರಂಚಿ ಬ್ರಹ್ಮ ಸರಸ್ವತಿಯಿಂದ ವೈ- ಕಾರಿಕ ರುದ್ರ ಶೇಷಗರುಡರ ನೀ 11 ಸೂತ್ರ ಶ್ರದ್ಧಾ ದೇವೇರಿಂದ ಪವಿ ತ್ರತೈಜಸ ರುದ್ರ ಬಂದಾ ಪ- ಪುತ್ರರಾಗಿಹರತಿ ಚೆಂದಾ ||ಆಹಾ|| ಪುತ್ರನಾದ ತಾಮಸ ರುದ್ರ ಶೇಷಗೆ12 ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು ಉದ್ಧಾರ ಮಾಡಿದ ಜೀವರ ಅನಿ ರುದ್ಧನ ಕೈಲಿ ಕೂಡಲವರಾ ಅನಿ ರುಧ್ದನು ಮಾಡ್ದ ವಿಸ್ತಾರಾ ||ಆಹಾ|| ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ- ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ 13 ಮಹತ್ತತ್ವದಿಂದಹಂಕಾರ ತತÀ್ತ ್ವ ಮಹದಹಂಕಾರವು ಮೂರುತರ ಇದ- ರೊಳು ಬ್ರಹ್ಮವೈಕಾರಿಕ ಶರೀರವಾಗಿ ಪರಿ ಈ ರೂಪ ವಿವರಾ ||ಆಹಾ|| ಅಹುದು ತೈಜಸದಿಂದ ಶೇಷನ ದೇಹವು ತಾಮಸದಿಂದಲಿ ರುದ್ರ ತಾನಾದನು 14 ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ ನಾರೀ ರೂಪನಾಗಿ ಇನ್ನು ಎಡದಿ ಸ್ರೀರೂಪ ಜೀವರುಗಳನ್ನು ಬಲದಿ ಪುರುಷ ಜೀವರೆಲ್ಲರನ್ನು ||ಆಹಾ|| ಧರಿಸಿ ಅವರ ದೇಹಗಳನಿತ್ತು ಅ ನಿರುದ್ಧನ ಕೈಯೊಳಿತ್ತ ಪರಿಯನ್ನು 15 ಅದರಂತೆ ಅನಿರುಧ್ದದೇವ ತಾ ನದಕಿಂತ ಸ್ಥೂಲದೇಹವ ಮೂಲ ಪ್ರಕೃತಿಯಿಂದ ಗುಣವಾ ಕೊಂಡು ಅದುಭುತ ಮಹತ್ತತ್ವತೋರ್ವ ||ಆಹಾ|| ಅದುಭುತ ಮಹತ್ತತ್ವದಿಂದಹಂಕಾರ ಉದಿಸಿದ ಪರಿಯನು ಮುದದಿಂದಲಿ ಅರಿತು 16 ಪರಮ ಕರುಣೆಯಲೀ ರುದ್ರನು ಅರ್ಧ ನಾರೀರೂಪ ತಾಳಿ ಇನ್ನೂ ಎಡದಿ ಸುರರಸ್ತ್ರೀಗಳನ್ನು ಬಲದೀ ಸುರಪುರಷರನ್ನೂ ||ಆಹಾ|| ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತ ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ 17 ಅನಿರುಧ್ದ ದೇವನು ಜೀವರ ಸ್ಥೂಲ ತನುವ ಕೊಟ್ಟು ಪಾಲಿಪ ತದಭಿ- ಮಾನಿ ಶ್ರೀ ಭೂ ದುರ್ಗಾ ಮಾಡಿ ತಾನೆಲ್ಲರ ಸತತ ಪೊರೆವಾ ||ಆಹಾ|| ಮಹತ್ತತ್ತಾ ್ವಭಿಮಾನಿಗಳೆನಿಸಿದ ದೇವನ18 ಅಹಂಕಾರ ತತ್ತಾ ್ವಭಿಮಾನಿ ಅದಕೆ ಅಹಿಗರುಡರು ಅಭಿಮಾನಿ ಇನ್ನು ಅನಿರುದ್ಧಾದಿ ರೂಪತ್ರಯವು ಇದಕೆ ಇನ್ನು ನಿಯಾಮಕನು ಎನ್ನು ||ಆಹಾ|| ಮಹತ್ತತ್ವಾ ನಿಯಾಮಕ ವಾಸುದೇವನಿಂದ- ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು 19 ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ ಯನ್ನೆ ವೈಕಾರಿಕದಿಂದಲವರಾ ಮಾಡಿ ಘನ್ನ ತೈಜಸದಿಂದಲಿಂದ್ರಿಯ ತತ್ಪವೆ- ಲ್ಲನೆಸಗಿದಂಥ ವಿವರಾ ||ಆಹಾ|| ಉನ್ನಂತ ತನ್ಮಾತ್ರ ಭೂತಪಂಚಕಗಳ ತಾಮಸದಿಂದಲಿ ಉದಿಸಿದ ಪರಿಯನು 20 ಯುಕ್ತಸ್ಥಾನಾದಿಗಳನ್ನು ಕೊಡೆ ಉತ್ತಮೋತ್ತಮನನ್ನು ತಾವು ಸುತ್ತಿ ಸ್ತುತಿಸಲು ಇನ್ನೂ ||ಆಹಾ|| ತತ್ವದೇವತೆಗಳ ಭಕ್ತಿಗೆ ಒಲಿದು ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನು21 ರಜಸುವರ್ಣಾತ್ಮಕವಾದ ಘನ ನಿಜ ಐವತ್ತು ಕೋಟಿ ಗಾವುದ ಉಳ್ಳ ಅಜಾಂಡವನ್ನು ತಾ ತೋರ್ದ ತನ್ನ ನಿಜಪತ್ನಿ ಉದರದಿ ಮಾಡ್ದ ||ಆಹಾ|| ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ 22 ಪಾತಾಳಾದಿ ಸಪ್ತಲೋಕ ಕಡೆ ಪರಿಯಂತ ರೂಪ ತಾ ತಾಳಿದ ಆದ್ಯಂತ ಇಂತು ನಿರತನು ಸಚ್ಚಿದಾನಂದ ||ಆಹಾ|| ಇಂತು ವಿರಾಟ ತನ್ನಂತರದೊಳು ತತ್ವರೆಲ್ಲರ ತತ್‍ಸ್ಥಳದೊಳಿಟ್ಟು ಪೊರೆದನ್ನ23 ಸಕಲ ಉದಕ ಶುಷ್ಕದಿಂದ ಇರಲು ತಕ್ಕ ಮುಕ್ತಾಮುಕ್ತರ ಭೇದದಿಂದ ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ|| ಅಕಳಂಕ ಪುನ್ನಾಮಕನು ಧಾಮತ್ರಯ ಮೊದಲಾದ ನರಕ ಪಂಚಕಗಳ ಮಾಡಿದ 24 ಉದಕ ಶೋಷಣೆಯನ್ನು ಮಾಡಿ ಇನ್ನುಮ- ಹದಹಂಕಾರವ ಕೂಡಿ ಭೂತ ಪಂಚಕವ ಮಿಳನ ಮಾಡಿ ಆಗ ಹದಿನಾಲ್ಕೂದಳಾತ್ಮಕ ಪದ್ಮತೋರಿ ||ಆಹಾ|| ಅದುಭುತ ಪದುಮದಿ ಉದಿಸಿದ ಬ್ರಹ್ಮನು ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ 25 ಪದುಮದಲಿ ಚತುರಾಸ್ಯನಾಗಿ ಅದು ಭುತÀ ಮಹಿಮೆ ನೋಡುತ ತಾನೆ ಮುದದಿಂದ ಮೊಗತಿರುಗಿಸುತಾ ಅದ ಅದುಭುತ ಶಬ್ದಕೇಳುತ್ತಾ ||ಆಹಾ|| ತದಪೇಕ್ಷ ತಪವನಾಚರಿಸಿ ನಾಳದಿ ಬಂದು ಪದುಮನಾಭನು ತಾನು ಮುದದಿಂದ ನೋಡಿದ 26 ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ ವರವ ಕೊಟ್ಟು ಪಾಲಿಸಿ ಸೃಷ್ಟಿ ನಿರುತ ಮಾಡಲು ತಾ ಬೆಸಸೀ ತಾನು ಅವನಂತರದೊಳು ನೆಲೆಸೀ ||ಆಹಾ|| ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ ತೋರ್ವ ಉರಗಾದ್ರಿವಾಸವಿಠಲ ವೇಂಕಟೇಶನ್ನ 27
--------------
ಉರಗಾದ್ರಿವಾಸವಿಠಲದಾಸರು
ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ಪ ಭೂತಳದಿ ಪ್ರಖ್ಯಾತವಾದ ಶ್ವೇತಗಿರಿನಿವಾಸಯನ್ನ ಪೊರಿಯೊ ದೇವಾ ಅ.ಪ ಪಾಥೋರುಹ ಭಜಿಪ ಸತತ ಸೀತ ಲಕ್ಷ್ಮಣ ರಘು ನಾಥನು ಸಂಚರಿಸಿದಂಥ 1 ಸಪ್ತಋಷಿಗಳಿರುವ ಕೃಷ್ಣಾ ಚೋತ್ತರ ವಾಹಿನಿಯ ಸ್ನಾನ ಕ್ಷೇತ್ರಕಾಶಿಗಿಂತ ಫಲದಿ ಉತ್ತಮವೆಂದೆನಿಸಿದಂಥ 2 ಶ್ರೀಮನೋಹರ ನಿಮ್ಮಯ ಪದ ತಾಮರಸವ ಪೂಜಿಸಲು ಸೂತ್ರಾಮ ಲೋಕದಿಂದ ಬರುವ ಕಾಮಧೇನು ಚರಿಸಿದಂಥ 3 ಅಷ್ಟತೀರ್ಥಂಗಳಿರುವ ಶ್ರೇಷ್ಠಸ್ಥಾನವೆಂದು ತಿಳಿದು ನಿಷ್ಠೆಯಿಂದ ಸೇವಿಸುವರ ಭೀಷ್ಠಗಳನ್ನು ಸಲಿಸುವಂಥ 4 ಶ್ವೇತರಾಜ ತಪವಗೈದು ಪೂತವಾದ ಪದವಿ ಪಡೆದ ಆ ತರುವಾಯದಲಿ ಗಿರಿಯು ಶ್ವೇತನಾಮದಿಂದ ಮೆರೆಯೆ 5 ಅಂದವಾಗಿ ತಿಳಿದು ಭಕುತಿ ಯಿಂದ ಶೇವಿಪ ಮನುಜಗೆ ಭವ ಬಂಧ ಬಿಡಿಸ್ಯಾನಂದ ಗರಿವ 6 ತುಂಗಗಿರಿಯ ಸ್ಥಾನದಲ್ಲಿ ಶೃಂಗನೆಂಬ ಋಷಿಯು ತಪದಿ ಮಂಗಳ ಪ್ರದ ಕಾರ್ಪರನರ ಸಿಂಗನೊಲಿಸಿ ವರವ ಪಡೆದ 7
--------------
ಕಾರ್ಪರ ನರಹರಿದಾಸರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು