ಒಟ್ಟು 9 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಯ್ಯ ನಿನ್ನಪಾದ ಜಗದಖಿಲ ಜನರು ಬಗೆ ತಿಳಿಯಲಾರರು ಸುಗುಣಿರೊಂದಲ್ಲದೆ ಪ ಜಾರೆ ಸೇರುವಳೆ ಸುವಿಚ್ಯಾರದ ಮಾತುಗಳ ಜಾರ ಸೇರುವನೆ ಜ್ಞಾನಸಾರ ಬೋಧಾಮೃತವ ಚೋರ ಸೇರುವನೆ ಇನತೋರಿಸಲು ಕಿರಣಗಳ ಕ್ಷೀರಮಂ ಸೇರುವನೆ ಸುರಪಾನಿಗೀಯಲು 1 ವಿಧವೆಗೆ ಸೇರುವುದೆ ಒದಗುವವರ ಬಸಿರು ಮುದುಕನಿಗೆ ಸೇರುವುದೆ ಹದದ್ಹೆಣ್ಣಿನೊನಪು ಅಧಮರಿಗೆ ಸೇರುವುದೆ ಸದಮಲಿನ ಕಥಾಶ್ರವಣ ಬುಧಜನಕೆ ಸೇರುವುದೆ ಕದನಿಕರ ನೆರೆಯು 2 ಜೀನನಿಗೆ ಸೇರುವುದೆ ದಾನಿಗಳ ಗಾಂಭೀರ್ಯ ಹೀನನಿಗೆ ಸೇರುವುದೆ ಜಾಣರೊಡನುಡಿಯು ಸುಕೃತ ಕಾಣದ ಪಾಪಿಗೆ ಮಮ ಪ್ರಾಣ ಶ್ರೀರಾಮ ನಿನ್ನ ಧ್ಯಾನ ಸೇರುವುದೆ 3
--------------
ರಾಮದಾಸರು
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ