ದಾಸರ ಮೊರೆ ಲಾಲಿಸೋ ವೆಂಕಟಾಚಲ
ವಾಸ ಬಿನ್ನಪ ಲಾಲಿಸೊ ಪ
ಲೇಸು ಭಕುತಿಯು ಮಾಡದಲೆ ಬಲು
ಘಾಸಿಯಾಗುತ ಮನದಿ ನೊಂದು
ದಾಸನಾಗದೆ ಕ್ಲೇಶಪಟ್ಟೆನೊ
ಈಸುದಿನಗಳ ಕಳೆದೆನೊ ವೃಥಾ1
ತಳಿರು ಪೋಲುವ ನಿನ್ನಯ ಪಾದ-
ಕ್ಕೆರಗದೆನ್ನಯ ಸಿರವು
ದಣಿಯನೋಡದೆ ನಿನ್ನನು ಮಹಾಪಾಪ
ಗಳನೆ ಮಾಡುತ ನೊಂದೆನು 2
ಅನಿಮಿಷೇಶನೆ ನಿನ್ನ ಮಹಿಮೆಯ
ಕ್ಷಣಬಿಡದೆ ಧ್ಯಾನವನೆ ಮಾಡುವ
ಅನಲಸಖತನಯನಿಗೆ ನಮಿಸುವೆ
ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3
ಕಟಿಯ ಕಾಂಜಿಯ ದಾಮವು ನವರತ್ನದ
ಸ್ಫ್ಪಟಿಕ ಮುತ್ತಿನ ಹಾರವು
ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ
ಸ್ಫುಟದಿ ಶೋಭಿಪ ಉರವು 4
ವಟುವಿನಂದದಿ ಪ್ರಕಟನಾಗುತ
ಕುಟಿಲ ದಿತಿಜರಿಗಖಿಳ ವಿಧ ಸಂ-
ಕಟಗಳನೆ ಸಂಘಟನೆ ಮಾಡುವ
ನಟನ ತೆರ ವಟಪತ್ರಶಾಯಿ 5
ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ-
ಪಕವ ಪೋಲುವ ನಾಸಿಕ
ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ
ನಸುನಗುತಿಹ ಹಸನ್ಮುಖ6
ಶಶಿಯ ಧರಿಸಿದ ಅಸಮ ಭಕುತನು
ನಿಶಿಹಗಲು ತನ್ನ ಸತಿಗೆ ಬೆಸಸಿದ
ಅತಿಶಯದ ಮಹಿಮೆಯನೆ ಕೇಳುವ
ಮತಿಯ ಕೊಡು ಮನ್ಮಥನ ಪಿತನೆ 7
ಚಿತ್ತದೊಳಗೆ ನಿನ್ನಯ ಪಾದಾಂಬುಜ
ಭಕ್ತಿಯಿಂದಲಿ ಕಾಂಬುವ
ಭಕ್ತಜನರ ವೃಂದವ ಕರುಣದಿ ಕಾಯ್ವ
ವಿಷ್ಣು ಮೂರುತಿ ಕೇಶವ 8
ಎತ್ತನೋಡಿದರಿಲ್ಲ ನಿನ್ನ ಸಮ
ಉತ್ತಮರ ಕಾಣುವುದೆ ಮಿಥ್ಯವೊ
ಸತ್ಯವಿದು ಪುರುಷೋತ್ತಮನೆ ಎನ್ನ
ಚಿತ್ತದಲಿ ನಲಿನಲಿದು ಶ್ರೀಶ 9
ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ-
ರಮೆಧರೆಯರಿಂ ಸೇವ್ಯನೆ
ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ
ಸುಜನರಿಗೊಲಿಯುವನೆ 10
ಶ್ರವಣ ಮನನಕೆ ಒಲಿವ ದೇವನೆ
ದಿನದಿನದಿ ನಿನ್ನ ಮಹಿಮೆ ತೋರು ಶ್ರೀ-
ಕಮಲನಾಭ ವಿಠ್ಠಲನೆ ಕರುಣದಿ
ಶ್ರಮವ ಹರಿಸುಸುಧಾಮ ಸಖನೆ11