ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ.
ಬಪ್ಪ ತನ್ನಯ ಭಕ್ತ ಜನರ ಬವಣೆಗಳ
ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ.
ಅರವಿಂದ ಸಖನುದಯಿಸಲು ಅಜ
ಗರನಂತೆ ಬೀಳುವ ತಪ್ಪು
ಗುರು ಹಿರಿಯರ ಜರಿವಂಥ ತಪ್ಪು ನಿನ್ನ
ಸ್ಮರಣೆಯ ಮಾಡದ ತಪ್ಪು
ನಿತ್ಯ ಕರ್ಮಗಳ ಬಿಡುವ ತಪ್ಪು
ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ 1
ಸಂಧ್ಯಾ ಕೃತ್ಯಗಳ ಕಾಲದಲಿ ಪರ
ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ
ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ
ತಂದಿರಿಸದ ಮಹಾ ತಪ್ಪು
ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ
ಮಂದಗಮನೆಯಳ ಮಾತನಾಲಿಸುವಂಥ 2
ಮನ ವಚನಾದಿಗಳಿಂದ ಪರ
ವನಿತೇರ ಸ್ಮರಿಸುವ ತಪ್ಪು ಪುಣ್ಯ
ದಿನಗಳ ತ್ಯಜಿಸುವ ತಪ್ಪು ಪರ
ಧನಾಭಿಲಾಶಿಯ ತಪ್ಪು
ಕನಸಿಲಾದರು ನಿನ್ನ ನೆನೆಯದೆ ಸತಿಸುತ
ತನುವೆನ್ನದೆಂಬ ಚಿಂತನೆಯಿಂದ ಬಳಲುವ 3
ನೇಮ ವ್ರತಗಳೆಲ್ಲ ಮರತು ಸೌಖ್ಯ
ಕಾಮುಕನಾಗಿಹ ತಪ್ಪು ಬಹು
ಪಾಮರವೃತ್ತಿಯ ತಪ್ಪು ನಿನ್ನ
ದಯ ಶೋಭಿಸದಂಥ ತಪ್ಪು
ಆ ಮಹಾ ಮಂತ್ರಗಳ ಜಪಿಸದ ತಪ್ಪು
ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ 4
ನರಗುರಿಯಾದೆನ್ನ ತಪ್ಪ ನೋಡೆ
ಹುರುಳು ಗಾಣುವುದುಂಟೆನಪ್ಪ ಸರ್ವ
ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ
ವರನಿತ್ಯ ಸತ್ಯ ಸಂಕಲ್ಪ
ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ
ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ 5