ಕೃಪೆ ಮಾಡೋ ಕೃಷ್ಣ ಕೃಪೆಮಾಡೋ
ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ
ಚಂದ್ರಹಾಸನಂತೆ ವ್ರತ ಮಾಡಲರಿಯೆ
ಅಂದಿನ ಧ್ರುವನಂತೆ ತಪಗೈಯಲಾರೆ
ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ
ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1
ಕರಿರಾಜನಂತೆ ಕೂಗಲರಿಯೆನೋ
ಗರುಡನಂತೆ ಸದಾ ಹೊತ್ತು ತಿರುಗಲಾರೆ
ಮರುತಜನಂತೆ ಭಂಟನಾಗಲರಿಯೆ
ಉರಗರಾಜನಂತೆ ಶಯನಕಾಗಲಾರೆ 2
ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ
ರೂಪೆ ಭಾಮೆಯಂತೆ ಬಲು ಮೋಹಿಸಲಾರೆ
ಆಪಾಟಿ ಸಖನಾಗರಿಯೆನು ಮಕರಂದನೊಲು
ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3
ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ
ಸಾಜದಿ ಮಾಡುವೆ ತಿಳಿದಂತೆ ಪಾಮರನು 4