ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ-
ರಾದಿಯ ತಿಳಿಯಲು ಕೇಳಿ ಬಲ್ಲವರು ಪ
ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ
ಮೂಲ ಮಂತ್ರಂಗಳ ಜಪಿಸುವ ಬೂದಿ
ಮೂಲಾಧಾರವ ತೋರುವ ಬೂದಿ
ಕಾಲ ಕರ್ಮಂಗಳ ಕಡಿವಂಥ ಬೂದಿ 1
ಏಳು ಸುತ್ತಿನ ಒಳಗೆ ಇರುವಂಥ ಬೂದಿ
ಏಳು ವೈರಗಳನ್ನು ಕಳೆವಂಥ ಬೂದಿ
ಏಳು ಅಗಳ ದಾಟಿ ಹಾರುವ ಬೂದಿ ಬ-
ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2
ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ
ಕುಂಭಕದೊಳಗದ ಇರಿಸುವ ಬೂದಿ
ಸಂಭ್ರಮದಿ ಅರಸನ ಗೆಲುವಂಥ ಬೂದಿ
ಅಂಬರಕಾಗಿಯೆ ಲಂಬಿಪ ಬೂದಿ 3
ಪಂಚಾಗ್ನಿಯಿಂದಲೆ ಬೆಂದಿಹ ಬೂದಿ
ಪಂಚತತ್ವಂಗಳನು ಗೆಲುವಂಥ ಬೂದಿ
ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ
ವಂಚಿಸಿಕೊಳ್ಳದೆ ಧರಿಸುವ ಬೂದಿ 4
ಆರು ವೈರಿಗಳನ್ನು ತೂರುವ ಬೂದಿ
ಆರು ಭಾವಗಳನ್ನು ಬೇರಿಟ್ಟ ಬೂದಿ
ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ
ಆರಿಗೂ ತೋರದೆ ಹಾರುವ ಬೂದಿ 5
ಅಷ್ಟಮದಂಗಳ ಕಟ್ಟುವ ಬೂದಿ
ದುಷ್ಟಾತ್ಮರನ್ನು ಅಟ್ಟುವ ಬೂದಿ
ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ
ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6
ಸಕಲ ಋಷಿಗಳೆಲ್ಲ ಧರಿಸುವ ಬೂದಿ
ತ್ರಿಕರ್ಣ ಶುದ್ಧದಿ ತುಂಬಿದ ಬೂದಿ
ಮಕರಕುಂಡಲಧರ ಮರುಳಹ ಬೂದಿ
ಸಖನಹ ವರಾಹತಿಮ್ಮಪ್ಪ ಬೂದಿ 7