ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ
ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ
ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ
ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ
ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ
ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1
ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ
ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ
ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ
ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2
ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ
ಸಿಂಧುಶಯನ ಆನಂದನ ಕಂದನೆ ವೆಂಕಟೇಶ
ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ
ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3
ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ
ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ
ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ
ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4
ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ
ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ
ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ
ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5