ನೀನೆ ಸಕಲವೆನ್ನ ಸ್ವಾಮಿ ಶ್ರೀ ಹರಿಯೆ
ದೀನ ದಯಾಳು ನೀನೆವೆ ನಿಜಧೊರಿಯೆ ಧ್ರುವ
ತಂದೆ ತಾಯಿಯು ನೀನೆ ಬಂಧುಬಳಗ ನೀನೆ
ಹೊಂದಿಕಿ ಹೊಲಬು ನೀ ಎನ್ನ ನೀನೆ
ಎಂದೆಂದು ಸಲಹುವಾನಂದ ಮೂರುತಿ ನೀನೆ
ಕುಂದ ನೋಡದಿಹ್ಯ ಮಂದರಧರ ನೀನೆ 1
ಕುಲದೈವವು ನೀನೆ ಮೂಲಪುರಷ ನೀನೆ
ಒಲಿವ ಭಾಗ್ಯದ ಫಲಶ್ರುತಿಯು ನೀನೆ
ಸಾಲವಳಿಯು ನೀನೆ ಹಲವು ಭೂಷಣ ನೀನೆ
ಕುಲಕೋಟಿ ಬಳಗಾದ ಭಕ್ತವತ್ಸಲ ನೀನೆ 2
ಧನದ್ರವ್ಯಾರ್ಜಿತ ನೀನೆ ಘನಸೌಖ್ಯಾಕರ ನೀನೆ
ಅನುದಿನಲಿಗನುಕೂಲ ನೀನೆ
ದೀನ ಮಹಿಪತಿಸ್ವಾಮಿ ಭಾನುಕೋಟಿ ತೇಜನೆ
ಮನೋಹರ ಮಾಡುವ ಮಹಾಮಹಿಮ ನೀನೆ 3