ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ
ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು
ಮೂರು ನಿಮಿಷ ಅವನ ಮರೆಯಲಾಗದಾಯಿತು
ಬೀರುತಿರುವ ಮೋಹಜಾಲ ಸಡಲದಾಯಿತು 1
ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು
ಯಾವನಾದರೇನು ಇವನ ಕ್ಷಣವು ಕಾಣದೆ
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2
ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ
ಮಲಯ ಮಾರುತ ತಾ ತಲೆಯನಾಡುವ 3
ನಾದದ ಸುಧೆ ಸಾಗರದಲಿ ತೇಲುವಂತಿದೆ
ಮಾಧವ ತಾ ಸುಧೆಯ ರಸವನೆರಚುವಂತಿದೆ
ಬಾಧಿಸುತಿಹ ಭವದ ತಾಪವಡಗಿದಂತಿದೆ
ಮಾದರಿಫಲ ರಾಸಕ್ರೀಡೆ ತೋರುವಂತಿದೆ 4
ಸಕಲ ಲೋಕನಾಥನೀತನೆಂದು ತಿಳಿಯಿತು
ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು
ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು
ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5