ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು
ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ.
ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು
ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು
ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ
ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು 1
ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ
ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ
ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ
ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ 2
ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ
ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು
ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ
ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು 3