ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ