ಎಚ್ಚರಾದರು ದೇವಗಣರಿಂದು ನಮ್ಮ
ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ.
ಶಿಂಶುಮಾರ ಚಕ್ರದಂಶಮಕರ ತಿ-
ಗ್ಮಾಂಶು ಸಂಕ್ರಮಿಸುವ ಸಮಯದಲಿ
ಕಂಸಮರ್ದನ ಯದು ವಂಶಾಬ್ಧಿ ಚಂದ್ರ-
ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1
ಕಂದನ ಸಂಭ್ರಮ ತಂದೆಗೆ ಸುಖಕರ-
ವೆಂದು ಪೇಳುವ ಮಾತ ನಿಜವ ದೋರಿ
ಮಂದರಧರ ಮನ್ಮಥನ ಕೇತು ಬೆಳಗುವಾ-
ನಂದದಿ ರಥವೇರುತ್ತಿಂದು ಬರುವನೆಂದು 2
ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ-
ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ
ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ
ಪಕ್ಷಿವಾಹನನನ್ನು ಈಕ್ಷಿಪ ತವಕದಿ 3
ಪೃಥೆಯ ಕುಮಾರನ ರಥವ ನಡಸುತತಿ-
ರಥರನು ಗೆಲಿಸಿ ಸಾಮ್ರಾಜ್ಯವಿತ್ತ
ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ-
ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4
ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ
ಸಿದ್ಧ ಜಪರಿಗೆ ಸಿದ್ಧಿಸುವನೆಂದು
ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ
ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5
ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ
ಸೇರಿ ಸಂತೋಷದಿ ಜಯವೆನಲು
ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ-
ರ್ಪಾರಿಯನೇರಿ ಸಮೀರೇಡ್ಯಬಹನೆಂದು 6
ಮಾಯಿಜನರ ಮುರಿದೊತ್ತುತ ತತ್ವರ-
ಸಾಯನ ಸುಧೆಯ ಸಜ್ಜನರಿಗಿತ್ತು
ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ
ದಾಯಕ ವೆಂಕಟರಾಯನೀತನೆಯೆಂದು 7