ಹರಿಯೆ ಚಿತ್ರಲೀಲೆಗಳನು ಅರಿಯಲಳವೇ ಸುಲಭದಿ ಪ
ನಿರತ ಸೇವೆ ಮಾಡುತಿರುವ ಸಿರಿಯು ತಾನಚ್ಚರಿಯಲ್ಲಿರಲು ಅ.ಪ
ಪೊಡವಿಯಲಿ ದುರಿತಗಳನ್ನು ನಡೆನುಡಿಗಳಿಂದರಿಯದಿರುವ
ಹುಡುಗರಾಗಿ ನಲಿಯುವರನ್ನು ಸಿಡಿಲಿನಿಂದ ತನ್ನಡಿಗಳಿಗೆಳೆವ 1
ಕ್ಲೇಶದಿಂದ ಗಳಿತವಾದ ಹೇಸಿಗೆಯ ದೇಹದಲ್ಲಿ
ಆಸೆ ತೊರೆದು ನರಳುವರಲಿ ಲೇಶ ಕರುಣ ತೋರದೆ ಇರುವ2
ಸತ್ಯ ಸಂಕಲ್ಪನೆಂದರಿತು ನಿತ್ಯನನ್ನು ನೆನೆದು ತಮ್ಮ
ಕೃತ್ಯಗಳನು ರಚಿಸಿ ಮುದದಿ ತೃಪ್ತನಾಗುವ ಭಕ್ತರ ಪ್ರಸನ್ನ 3