ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ
ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ.
ಲೇಶ ಸ್ವತಂತ್ರವನಿತ್ತದ ನಂಬೀ
ಶಾಭಿಮಾನದಿ ಮಾಡುವ ಡೊಂಬಿ
ದೋಷಗಳಿಂದಾಹ ಫಲವೆ ನೀನುಂಬಿ
ವಾಸುದೇವನ ಮೂರ್ತಿಯನೆಂತು ಕಾಂಬಿ 1
ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ
ದಶಕರಣಗಳು ದುರ್ವಿಷಯದಿ ನೂಕೆ
ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ
ವಸುದೇವ ಸುತನ ಮರೆಯದಿರು ಜೋಕೆ 2
ಸತ್ಯ ಸಂಕಲ್ಪನಲ್ಲದೆ ಕರ್ತನಾವ
ತತ್ವೇಶರರಿತು ಕರ್ಮವ ಮಾಳ್ಪ ಸೋವ
ನಿತ್ಯ ನೀ ವರಿತ ಹಮ್ಮಮತೆಯ ಭಾವ
ಹತ್ತದಂತಿರೆ ಕಾವ ಕರುಣಾಳು ದೇವ 3
ಒಡೆಯರಿಲ್ಲದೆ ಪೋದ ವೃಕ್ಷದ ಫಲವ
ಬಡಿದು ತಿಂಬುವರು ಕಂಡವರೆಲ್ಲ ನೋಡು
ಕರ್ಮ ಮಡದಿ ಮೊದಲುಗೊಂಡು
ಕಡಲಶಯನಗರ್ಪಿಸುತ ಕಷ್ಟ ದೂಡು 4
ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ
ಇಹರಹರಾದರದಿಂದ ತಲ್ಲೀಲೆ
ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ
ಅಹಿಪತಿ ಗಿರಿರಾಜ ಎತ್ತುವ ಮೇಲೆ 5