ನಿನಗೇನು ಘನವೇನು ವನಜಾಕ್ಷ ವೆಂಕಟೇಶ
ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ
ದೇಶ ನಿನ್ನದು ಬಹುಕೋಶ ನಿನ್ನದು ಜಗ
ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು
ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ
ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ 1
ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ
ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ
ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ
ಗುಣಗಳವಗುಣಗಳ ನೋಡದೆ ಸಲಹಯ್ಯ 2
ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ
ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು
ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ 3
ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ
ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ
ಮಂದರಾದ್ರಿಯ ಗೋವಿಂದ ನಿನ್ನಯ ಪಾದ
ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ 4
ಮನದ ಸಂಕಲ್ಪಕೆ ಅನುಗುಣವಾಗಿಯೆ
ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ
ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ
ತನು ಮನದೊಳಗನುದಿನದಿನ ಸಲಹಯ್ಯ 5