ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ
ಅರ್ಕನಾ ತೇಜವನು ಗೊಗೆಯರಿದಪುದೇ ಪ
ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು
ಮಾನವ ನಾನು ಪರಮಾತ್ಮನೆ
ಏನಾದರೂ ಪೇಳಿ ಮೋಸಮಾಳ್ಪನು ಎಂದು
ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ 1
ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ
ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ
ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ
ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ 2
ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ
ಸ್ವಾನುಭವಸಂವೇದ್ಯ ಕೇವಲಾನಂದಾ
ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ
ತಾನು ತನ್ನನು ಬೈದು ದೂರಿಕೊಂಡಂತೆ 3
ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ
ಜಗದಾಚೆಗಿಹ ಪರಮಶಾಂತಿಯರಿಯುವನೇ
ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ
ಅಘನಾಶಶಂಕರನೆ ಅನ್ಯರರಿಯುವರೇ 4