ಸರಿಯೇನು ನಿನಗಿದು ಸರಸಿಜನಯನನೆ
ಚರಣ ಭಜಿಪರೊಳು ಕರುಣಿಸದಿರುವಿ ಪ
ದೀನಜನರ ಬಂಧು ನೀನೆ ನಿರ್ದಯನಾದರಿ
ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ
ಹೀನ ನಿನಗಲ್ಲೇನೈ ಗಾನವಿಲೋಲ 1
ಇಂದಿರೇಶಾನಾಥಬಂಧುವೇ ನೀ ದಯಾ
ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ
ಬಂದ ಸಂಕಟದೊಳಗಿಂದ ಸಲಹದಿರೆ
ಕುಂದು ನಿನಗಲ್ಲೇನೈ ಮಂದರನಿಲಯ 2
ನಂಬಿದ ಭಕ್ತರ ಇಂಬುದಾಯಕನು ನೀ
ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ
ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ
ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3