ಈ ಸುಖವ ಬಿಟ್ಟನ್ನು ಬೇರೆ ಸುಖವುಂಟೆ
ವಾಸುದೇವನ ಭಜಿಸಿ ಸುಖಿಯಾಗು ಮನವೆ
ಈ ಸುಖವ ಬಿಟ್ಟಿನ್ನು ಬೇರೆ ಸುಖವುಂಟೆ ಪ
ಕಾಮಕ್ರೋಧಾದಿಗಳ ಕಡೆಗೊತ್ತಿ ನಿರತ ನಿ
ಷ್ಕಾಮನಾಗಿಯೆ ತುಲಸಿ ಕುಸುಮಗಳ ತಂದು
ಪ್ರೇಮಪೂರಿತನಾಗಿ ಸರ್ವಪರಿಪೂರ್ಣ ಶ್ರೀ
ರಾಮಪೂಜೆಯಗೈದು ಸುಖಿಯಾಗು ಮನವೆ 1
ಸೂನು ಮನೆ ಮೊದಲಾದ ಮಮಕಾರವನು ಬಿಟ್ಟು
ಧ್ಯಾನವನು ಶ್ರೀಹರಿಯ ಮೂರ್ತಿಯೊಳಗಿಟ್ಟು
ಸಾನುರಾಗದಿ ಹರಿಯ ನಾಮಸುಧೆಯನು ನೀನು
ಪಾನವನುದಿನ ಗೈದು ಸುಖಿಯಾಗು ಮನವೆ 2
ಧರೆಯೊಳತ್ಯಧಿಕವೆಂದೆನಿಪ ಚಿಕ್ಕನಾಗಾಖ್ಯ
ಪುರದೊಳಗೆ ಮಹಿಮೆಯಿಂ ಭಕ್ತರನು ಪೊರೆವ
ಗುರು ವಾಸುದೇವಾರ್ಯರೂಪ ವೆಂಕಟಪತಿಯ
ಚರಣದಾಸ್ಯವ ಪಡೆದು ಸುಖಿಯಾಗು ಮನವೆ3