ಮುಕ್ಕೋಟ ದ್ವಾದಶಿಯ ದಿವಸ
(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)
ರಂಭೆ : ಮತಿವಂತೆ ಪೇಳೀತನ್ಯಾರೆ ದೇವ
ವ್ರತತಿಯಧಿಪನಂತೆ ನೀರೆ ತೋರ್ಪ
ಅತಿಶಯಾಗಮ ಬಗೆ ಬ್ಯಾರೆ ರತ್ನ
ದ್ಯುತಿಯಾಭರಣವ ಶೃಂಗಾರ ಆಹಾ
ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-
ಗತಿ ಸ್ಮøತಿ ತತಿಗಳ ಮತಿಗಗೋಚರನಂತೆ 1
ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ
ಲೋಲ ಲೋಚನನ ನಾಟಕ ಸತ್ಕಥನವ
ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ
ಬಾಲಾರ್ಕಸದೃಶನೀತನು ಇರ್ಪನಲ್ಲಿ
ನೀಲನಿಭಾಂಗನು ನೆನೆವರ ಪಾಪವ
ಘೋಲುಘಡಿಸಲೆಂದೆನುತಲಿ ಭಾರ್ಗವ
ಕೋಲಿಂದೆಸಗಿದ ಧರಣಿಗೆ ಬಂದು ಸ-
ಲೀಲೆಗಳೆಸಗುವ ಜಾಲವಿದೆಲ್ಲ 2
ಸರಸಿಜಗಂಧಿ ಕೇಳ್ ದಿಟದಿ ತನ್ನ
ಅರಮನೆಯಿಂದ ಸದ್ವಿಧದಿ ಈರ್ವ-
ರರಸಿಯರ್ ಸಹಿತ ಮಿನಿಯದಿ ಅತಿ
ಭರದಿಂದ ಸೂರ್ಯನುದಯದಿ ಆಹಾ
ಉರುತರ ಹೇಮಪಲ್ಲಂಕಿಯೊಳಡರಿ
ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ3
ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ
ಬದ್ಧ ನೀ ಪೇಳ್ದ ಮನದ ಶಂಕಾವ್ರಾತ
ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು
ಸೂರ್ಯ ಉದಯ ಕಾಲದೊಳು
ಭದ್ರಭವನವನು ಪೊರಟು ವಿನೋದದಿ
ಅದ್ರಿಧರನು ಸಜ್ಜನರೊಡಗೂಡಿ ಉ-
ಪದ್ರಿತ ಪಾಪವ ಛಿದ್ರಿಪ ಸ್ನಾನಕೆ
ರೌದ್ರಿತ ರಾಮಸಮುದ್ರದ ಬಳಿಗೆ 4
ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ
ಪರಮ ಮಹಿಮೆನೆಂದ ಮೇರೆಗೆ ಘನ-
ತರ ಸ್ನಾನವೇನಿದು ಕಡೆಗೆ ವೃತ
ದಿರವೋ ಉತ್ಸವವೋ ಪೇಳೆನಗೆ ಆಹಾ
ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ
ಪರಿಗಳ ಸಾಂಗದಿಂದರುಹಬೇಕೆನಗಿನ್ನು 5
ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ
ಸಕಲಾಂತರ್ಯಾತ್ಮನೀತನು ಸತ್ಯಶೀಲೆ-
ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ
ಭಕುತವತ್ಸಲನು ಉತ್ಸವಿಸುವನಲ್ಲಿ
ವಿಕಳಹೃದಯ ನರನಿಕರಕಸಾಧ್ಯವೆಂ
ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ
ಅಖಿಳೋತ್ಸವ ಮಸ್ತಕಕಿದು ವೆಗ್ಗಳ
ಮುಕುಟೋತ್ಸವವೆಂದೆನುತಲಿ ರಚಿಸುವ 6
ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ
ವೊಲವಿಂದ ಗೈದ ಮೇಲಿವನು ತನ್ನ
ರಮಣಿಯರ್ಸಹಿತಂದಣವನು ಏರಿ
ನಿಲುನಿಲುತ್ಯಾಕೆ ಬರುವನು ಆಹಾ
ಪೊಳಲೊಳಗಿಹ ಜನನಿಳಯದ ದ್ವಾರದಿ
ಕಳಕಳವೇನಿದ ತಿಳುಪೆನಗೀ ಹದ7
ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು
ಮಿಂದು ತೋಷದಿ ಅಂದಣವನ್ನೇರಿ ತಾನು
ಇಂದೀ ಪುರದೊಳಿರ್ಪ ಜನರ ದೋಷಗಳ
ಕುಂದಿಸಲೆಂದವರವರ ದ್ವಾರದೊಳು
ನಿಂದಿರುತಲ್ಲಿಯದಲ್ಲಿ ಆರತಿಗಳ
ಚಂದದಿ ಕೊಳುತೊಲವಿಂದ ಕಾಣಿಕೆ ಜನ-
ವೃಂದದಿ ಕೊಡುತಾನಂದ ಸೌಭಾಗ್ಯವ
ಒಂದಕನಂತವ ಹೊಂದಿಸಿ ಕೊಡುವ 8
ರಂಭೆ : ಸರಸಿಜಾನನೆ ಮತ್ತೇನಿದನು ತನ್ನ
ಅರಮನೆಯಲ್ಲಿ ಭೂದ್ವಿಜನರನು ಸರ್ವ
ಪುರಜನ ಸಹಿತೊಳಗಿವನು ನಾನಾ
ತರದಿ ಮೆರೆವ ಭೋಜನವನು ಆಹಾ-
ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-
ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9
ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು
ಗಂಗಾಜನಕ ತನ್ನ ಗೃಹದಿ ವಿಪ್ರರನು
ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ
ಸಂಗಾತದಲಿ ಆರೋಗಣೆ ಗೈದು ಮೆರೆಸಿ
ಅಂಗಣದಲಿ ರಾತ್ರೆಯಲಿ ವಿನೋದದಿ
ಕಂಗೊಳಿಸುವ ಉರಿದರಳ ಸಮೂಹಕೆ
ರಂಗಪೂಜೆಯನುತ್ತಂಗವಿಸುವ ನಿಗ-
ಮಂಗಳೊಡೆಯನು ವಿಹಂಗಮಾರೂಢ 10
ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-
ಕುಮುದಾಪ್ತ ಠಾವಿನ ವೋಲು ಬಂದು
ಆದರಿಸಲಿದರ ಮಧ್ಯದೊಳು ತನ್ನ
ರಮಣಿಯರ್ ಸಹಿತ ತೋಷದೊಳು ಆಹಾ
ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-
ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11
ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ
ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ
ಚಾರು ಈ ಹೂವಿನ ತೇರನೇರುತಲಿ
ಕೇರಿ ಕೇರಿಯೊಳಾರತಿಗೊಳ್ಳುತಲಿ
ಭೋರಿಡುತಿಹ ವಾದ್ಯಧ್ವನಿ ಘನತರ
ಭೇರಿ ಮೃದಂಗಾದ್ಯಖಿಳ ವಿನೋದದಿ
ಸ್ವಾರಿಗೆ ತೆರಳುವ ಕ್ರೂರ ನರರ ಆ-
ಘೋರ ಪಾಪ ಜರ್ಝರಿಸಲೆಂದು 12
ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ
ಅರಮನೆಯಿದಿರು ರಥವನು ತಾನು
ಭರದೊಳಗಿಳಿದಂದಣವನು ಏರಿ
ಮೆರೆವಾಲಯದ ಸುತ್ತುಗಳನು ಆಹಾ
ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-
ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ13
ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ
ದುಷ್ಟಮರ್ದನ ರಥವಿಳಿವುತ್ತಲಾಗೇ
ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ
ಅಷ್ಟಾವಧಾನವ ರಚಿಸುತ್ತ ಕಡೆಗೆ
ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ
ಮೇಷ್ಟಜನಕೆ ಸಂತೋಷಾನಂದದಿ
ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ
ಇಷ್ಟವನೀವ ಯಥೇಷ್ಟ ದಯಾಬ್ಧ 14
ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು
ಹರಿ ಏಕರೂಪನೆನ್ನುತಲಿ ಲಕ್ಷ್ಮೀ
ಕರವೆನಿಸುವ ಕಾರ್ಕಳದಲಿ ಭಾಗ್ಯೋ-
ದಯ ದೇವಾಲಯದ ಮಧ್ಯದಲಿ ಆಹಾ
ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ-
ಕರ ವೆಂಕಟೇಶನ ಚರಣಕಮಲಗಳ 15