ಹಿಗ್ಗದಿರು ಹಿಗ್ಗದಿರು ಮನುಜಪಶುವೆ |
ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ
ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ |
ಶ್ರೇಯದಲಿ ದಶರಥ ನಹುಷನೇನೊ ||
ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ |
ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1
ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ |
ಘೋರ ತಪಸಿನಲಿ ವಿಶ್ವಾಮಿತ್ರನೇನೊ ||
ವಿರುಕುತಿಯಲಿ ಸುರಸೈನ್ಯ ನಾಯಕನೇನೊ |
ಹಾರುವ ಬಿಂಕದಲಿ ಗರುಡ ನೀನೇನೊ 2
ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ |
ತಿಳಿವಳಿಕೆಯಲಿ ವಿದುರ ಸಂಜಯನೇನೊ ||
ಒಲಿದು ಪಾಡುವಲಿ ನಾರದ ತುಂಬುರನೇನೊ |
ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3
ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ |
ಭುಕುತಿಯಲಿ ಅಗಸ್ತ್ಯ ಬಕ ನೀನೇನೊ ||
ಉಕುತಿಯಲಿ ಸೂತ ಸಹದೇವ ಶೌನಕನೇನೊ |
ಶಕುತಿಯಲಿ ವಾಲಿ ಯಮರಾಯ ನೀನೇನೊ 4
ಶುಕ ಜನಕ ಸನಕಾದಿಗಳೇನೊ |
ಕರ್ಣ ನೀನೇನೊ ||
ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ |
ವೇಗದಲಿ ಪುರುಷ-ಮೃಗನು ನೀನೇನೊ 5
ಸಖತನ ಮಾಡುವಲ್ಲಿ ಶ್ವೇತವಾಹನನೇನೊ |
ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ ||
ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ |
ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6
ವಿತ್ತದಲಿ ನೀನು ವೈಶ್ರವಣನೇನೊ |
ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ |
ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ |
ಸುತ್ತವಲಿ ಪ್ರಿಯವ್ರತ ರಾಯನೇನೊ 7
ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ |
ಸ್ತುತಿಯಲ್ಲಿ ಮುಚುಕುಂದರಾಯನೇನೊ ||
ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ |
ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8
ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ |
ತಾಪ ತೋರುವಲ್ಲಿ ರವಿ ಅನಳನೇನೊ |
ಕೋಪ ಮಾಡುವಲ್ಲಿ ಗಿರಿಜಾರಮಣನೇನೊ |
ತಾಪಸಿರ ನಡುವೆ ವಸಿಷ್ಠ ನೀನೇನೊ9
ಉನ್ನತದಲಿ ನೀನು ಮೇರು ಪರ್ವತನೇನೊ |
ಘನ ಮದದಲಿ ಧೃತರಾಷ್ಟ್ರನೇನೊ ||
ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ |
ಮುನ್ನೆ ಕವನದಲ್ಲಿ ಶುಕ್ರದೇವನೇನೊ 10
ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ |
ಆ ಮಹಿಮರ ಸರಿ ನೀನಲ್ಲವೊ ||
ಸಿರಿ ವಿಜಯವಿಠ್ಠಲರೇಯನ್ನ |
ನೆಮ್ಮಬೇಕಾದರೆ ಸೋಹಂ ನಿರಾಕರಿಸು11