ವಾಸುದೇವ ಎನ್ನ ಘಾಸಿಗೊಳಿಸದೆ
ನೀ ಸಲಹಲಿ ಬೇಕೊ ಪ.
ಈ ಶರೀರದೊಳು ಮಾಯಾಸಹಿತ-
ದಿ ಶ್ವಾಸನಾಡಿಯೊಳು ವಾಸವಾಗಿಹ ಅ.ಪ.
ಅನಿರುದ್ಧ ನಾಮದಿ
ಅನುದಿನ ಸಲಹುತಲಿ
ದನುಜನಾದ ಪಾಪಾತ್ಮನ ನಾಭಿಯೊಳ್
ಅನಿಲನಿಂದಲಿ ಶೋಷಿಸುವೆ ಪ್ರದ್ಯುಮ್ನ 1
ಹೃದಯದಿ ರಕ್ತವರ್ಣದಲಿ ನೀನಿರುತಲಿ ಸಂಕರ್ಷಣನೆನಿಸಿ
ಪದೋಪದಿಗೆ ಪಾಪಾತ್ಮಕನನು ಸುಟ್ಟು
ಸದಮಲ ಹೃದಯವ
ಶುದ್ಧಿಗೈಯ್ಯುವ 2
ಮಧ್ಯದಿ ನಾಡಿಯ ಮಧ್ಯದ ಹೃದಯ ಪದ್ಮ
ಮಧ್ಯ ಎಂಟು ದಳದಿ
ವಿದ್ಯಮಾನನಾಗಿ ಬಿಂಬನೆನಿಸಿ ನಿನ್ನ
ಪೊದ್ದಿಹ ಜೀವರ ಭಾವನೆಯಂತೆ ಕಾಂಬೆ 3
ಕೊಳಲನೂದುವ ನಿನ್ನ ಚಲುವರೂಪದ ಕಾಂತಿ
ಪೊಳಲೆಲ್ಲ ತುಂಬುವುದೊ
ನಳಿನಾಕ್ಷಿಯರ ಕೂಡಿ ಥಳಥಳಪ ನಿನ್ನ
ಬಲು ಸಂಭ್ರಮದೊಳು ಸುರರೆಲ್ಲ ಸ್ತುತಿಪರೊ 4
ಸಿರಿ ಸಹಿತದಿ ಇರುವೆ
ವರನಾಡಿ ಮಾರ್ಗದಿ ಅರಿತು ಭಜಿಸೆ ಮುಕ್ತಿ
ಪೊರೆಯುವ ಬಿರುದುಳ್ಳ ಗೋಪಾಲಕೃಷ್ಣವಿಠ್ಠಲ5