ಯಾಕೆ ಸುಮ್ಮನೆ ಪೇರಿ ಹೊಡೆಯುವಿ
ಕಾಕು ದುರ್ಭವ ಚಕ್ರದಿ ಪ
ಲೋಕದಿರುವು ನಿನಗೇನು ಸ್ಥಿರವೆಲೋ
ಕಾಕುಜೀವ ವಿಚಾರ ಮಾಡದೆ ಅ.ಪ
ಕಾಕುಸಿರಿಗೆ ಕೈಹಾಕಿ ಬಲು ಬಲು
ಶೋಕದಬ್ಧಿಲಿ ಮುಳುಗಿದ್ಯೊ
ನೂಕಿ ಯಮನರೊದೆದು ಎಳೆವಾಗ
ಲೋಕಸಂಪದ ನಿನ್ನ್ಹಿಂದೆ ಬರುವುದೆ 1
ನಾನು ಯಾರೆಂದೆಂಬ ಖೂನ ಸು
ಜ್ಞಾನ ವಿಡಿದು ತಿಳಿಯದೆ
ಶ್ವಾನಸೂಕನಂದದಿ ಮಹ
ಹೀನ ಬವಣೆಯೊಳ್ಬೀಳುತ 2
ಗೋತಗೋಜಲಕುಣಿ ಈ ಸಂಸಾರ
ರೋತಿ ಹೊಲಸಿಕ್ಕಿ ನಾರುವ
ನೀತಿಗೆಟ್ಟದರೊಳಗೆ ಬಿದ್ದೆಮ
ಭೀತಿಯಿಂ ಬಳಲುವುದೇನೆಲೊ 3
ಪೂರ್ವಪುಣ್ಯದಿಂ ಸಿಕ್ಕ ಈ ಮಹ
ಪರ್ವಕಾಲ ಸಮಯರಿಯದೆ
ದುರ್ವಿಕಾರದಿಂ ಸರ್ವ ಕಳೆಯಲು
ದೊರೆವುದೇ ಪುನ:ಬಯಸಲು 4
ತೋರಿ ಇಂದ್ರಜಾಲದಂದದಿ
ಹಾರಿಹೋಗುವ ಮಾಯ ನೆಚ್ಚಿ
ಸಾರತರ ಮೋಕ್ಷವನು ಕರುಣಿಪ
ಶ್ರೀರಾಮನ ನಂಬದೆ 5