ಕೆಟ್ಟೆ ಕೆಟ್ಟೆ ಕೆಟ್ಟೆ ಕೃಷ್ಣ ದೃಷ್ಟಿಕೊಟ್ಟು ಕೈಯ ಪಿಡಿಯೋ ಪ
ಮೂರ್ತಿ ಬಿಟ್ಟರೆನ್ನ ಕಷ್ಟಬಿಡಿಸೆಯಾರ ಬೇಡಲೋ ಅ.ಪ
ಕಟ್ಟಿತಾಳಿ ತೊರೆಯೆ ಗಂಡ ಕಷ್ಟವಲ್ಲೆ ಸತಿಗೆ ಪೇಳು
ಶಿಷ್ಠ ದೊರೆಯೆ ದಾಸನೆಂಬಿ ಶ್ರೇಷ್ಠತಾಳಿ ಕಂಠದಲ್ಲಿದೆ
ಬಿಟ್ಟಿ ಏನೋ ಬಿರದು ಎಲ್ಲ ಕಟ್ಟಿಕೊಂಡು ಮೆರೆಯುತಿಹುದು
ಕೆಟ್ಟದೂರು ತಟ್ಟದಿರದು ಭ್ರಷ್ಠನೆನಿಸಬೇಡೊ ಎನ್ನ 1
ಎಡವಿ ಬೀಳೆ ಮಗುವು ತಾಯಿ ಕಡಿವಳೇನು ಪೊಡವಿಗೊಡೆಯ
ಅಡಿಯ ಪಿಡಿದ ದಾಸನಾನು ಬಡವನಾದರೇನೂ ನುಡಿಯೋ
ಭಾರ ನಿನಗೆ ತಡವು ಯಾಕೋ ಬರಿದೆ ಬಿಂಕ
ಸಡಲಿ ಸುತ್ತ ಮಾಯಪಾಶ ದೃಢವ ಮಾಡು ಭಕ್ತಿ ವಿರಕ್ತಿ 2
ದೋಷಿಯಾದರೇನು ನಾನು ದೋಷದೂರನಲ್ಲೆ ನೀನು
ನಾಶಮಾಡು ಬೀಸಿದೃಷ್ಠಿ ಮೀಸಲಲ್ಲೆ ನಿನಗೆ ಸ್ವಾಮಿ
ಈಶ ಕರುಣಕುಂಟೆ ಮೇರೆ ಓಸು ಜಗದ ಭಾಸವೆಲ್ಲ
ಶ್ರೀಶ ನೀನು ಕೊಟ್ಟರುಂಟು ದಾಸಪೋಷ ಶ್ವಾಸನಾಣೆ 3
ಗಂಟು ಕಳ್ಳ ನೀನೆ ಸತ್ಯ ಭಂಟನೆನ್ನ ಸ್ವತ್ತು ನೀನೆ
ನೆಂಟ ಬೇರೆ ಇಲ್ಲದಿರಲು ಅಂಟಿಸಿರುವೆ ವಿಷಯ ಕಂಟಕ
ತಂಟಿ ಬಿಟ್ಟು ಈಗಲೇನೆ ಅಂಟಿಕೊಳ್ಳೊ ಮನದಿ ಗಟ್ಟಿ
ಕುಂಟು ಕಲೆಯ ಸುಟ್ಟುಬಿಟ್ಟು ಉಂಟು ಮಾಡು ಎಲ್ಲ ನನಗೆ 4
ಬೆಟ್ಟದೊಡೆಯ ಶ್ರೀನಿವಾಸ ಎಷ್ಟರವನೊ ನಾನು ಭೃತ್ಯ
ಪಾದ ಪಿಡಿದಿಹೆ
ಸುಟ್ಟು ಸುಟ್ಟು ಭವದಿ ಬೆಂದು ಇಷ್ಟು
ನುಡಿದೆ ಜಯಮುನೀಂದ್ರ
ಶ್ರೇಷ್ಟಹೃಸ್ಥಮಧ್ವ ಶ್ರೀ ಪ್ರೇಷ್ಟದೈವ ಕೃಷ್ಣವಿಠಲ5