ಎಲ್ಲಿಗೆ ಗಮನವಿದು ದುರ್ಗಾಂಬಿಕೆ
ಎಲ್ಲಿಗೆ ಗಮನವಿದು ಪ.
ಗಮನ ಹರವಲ್ಲಭೆ ನೀ ದಯ-
ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ.
ಚಂಡಿಕೆ ಮಹಮ್ಮಾಯೆ ದೇವಿ ಪ್ರ-
ಚಂಡ ಲೋಕತಾಯೆ
ಖಂಡಪರಶುಪ್ರಿಯೆ ಅಖಿಲ ಭೂ-
ಮಂಡಲಕಧಿಪತಿಯೆ
ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ-
ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1
ನಿಲ್ಲು ನಿಲ್ಲು ಜನನಿ ಬಾಲಕ-
ನಲ್ಲವೆ ಹೇ ಕರುಣಿ
ಪುಲ್ಲನಯನೆ ತ್ರಿಗುಣಿ ದಯವಿನಿ-
ತಿಲ್ಲವೆ ನಾರಾಯಣಿ
ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ
ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2
ದಾರಿ ಯಾವುದಮ್ಮ ಮುಕ್ತಿಯ
ದಾರಿ ತೋರಿಸಮ್ಮ
ಸೇರಿದೆ ನಾ ನಿಮ್ಮ ಭವಾಬ್ಧಿಯ
ಪಾರುಗಾಣಿಸಮ್ಮ
ಚಾರುನಿಗಮ ಶಿರಭೋರೆನಿಪ ವಿಚಾರ-
ಸಾರವಿತ್ತು ದಯಪಾಲಿಸು ಶುಭವರ3
ಕಷ್ಟದುರಿತ ಭಯವ ತಾ ಬಡಿ-
ದಟ್ಟಿ ಭಕ್ತಕುಲದ
ಶ್ರೇಷ್ಠತನದಿ ಪೊರೆವ ತನ್ನ
ಇಚ್ಛೆಯ ಕೈಗೊಳುವ
ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ
ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4