ಹೇಮದ ತೊಟ್ಟಿಲ ಭಾಮೆಯರ್ಹೂಡಿ
ಕೋಮಲ ಕಾಂಚನಧಾಮವ ಮಾಡಿ
ಕಾಮಜನಕನೊಳು ಕಾಮಿತ ಬೇಡಿ
ಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1
ಚೆನ್ನಿಗರರಸ ಮೋಹನ್ನ ಸುಶೀಲ
ಕನ್ನಡಿ ಕದಪಿನ ಕಮನೀಯ ಬಾಲ
ಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲ
ನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2
ಕೆಂದಾವರೆಯಂತೆ ಚೆಂದುಳ್ಳ ಚರಣ
ಚಂದಿರವದನ ಗೋವಿಂದನ ಶರಣ
ಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣ
ಕಂದ ಕಂದರ್ಪನ ಸುಂದರಾಭರಣ ಜೊ ಜೋ 3
ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣ
ನ್ಯಾಯ ನೀತಿ ಸದುಪಾಯ ಸಂಪನ್ನ
ಪ್ರೀಯನೆ ಕರ್ಣಾಂತಾಯತನಯನ
ಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ4