ಸರಸ್ವತಿ ಸ್ತುತಿ
ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ-
ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ.
ಶೋಕಭಯದೂರೆ ಭಕ್ತಾನೀಕಮಂದಾರೆ ಜಗ-
ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1
ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ-
ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2
ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ-
ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3
ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ-
ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4
ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ-
ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5