ಗಂಟೆ ಹೊಡೆಯುತಿದೆ ಕೇಳೆಲೋ ಮೂಢಾ
ಪಂಟು ಬಡಿಯುತ ಕೊಡಲುಬೇಡಾ ಪ
ಶ್ರುತಿಶಿರಗಳ ಬೋಧದ ಈ ಗಂಟೆ
ಮತಿವಿಭ್ರಮೆಯ ಬಿಡಿಸುವ ಗಂಟೆ
ಅತಿಮಾನವಸ್ಥಿತಿ ಸಾರುವ ಗಂಟೆ
ಕ್ಷಿತಿಯೊಳಗಿದುವೆ ಸಾರ್ಥಕ ಗಂಟೆ 1
ಜೀವೇಶ್ವರರೈಕ್ಯದ ಘನ ಗಂಟೆ
ದೇವನೆ ನೀನೆಂದರುಹುವ ಗಂಟೆ
ಸಾವಿನ ಸಂಕಟ ಕಳೆಯುವ ಗಂಟೆ
ಕಿವಿಯಿದ್ದು ಕೇಳದೆ ಬಿಡುವವರುಂಟೇ2
ತೋರಿಕೆ ಅನಿಸಿಕೆ ಪುಸಿ ಎಂಬ ಗಂಟೆ
ಪಾರಮಾರ್ಥ ಸತ್ಯದ ಸವಿ ಗಂಟೆ
ಘೋರನಿದ್ರೆಯಿಂದೆಚ್ಚರಿಸುವ ಗಂಟೆ
ಗುರುಶಂಕರನಾ ಪ್ರವಚನ ಗಂಟೆ 3