ಏಳೇಳು ಬಾಲಕನೆ ಅಜ್ಞಾನನಿದ್ರೆಯಿಂ
ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ
ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು
ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ
ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ
ಕೋಳಿ ಕೂಗುತಲಿಹುದು `ತತ್ವಮಸಿ' ಎಂದು 1
ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ
ಚಿತ್ತವೆನ್ನುವ ಕಮಲವರಳಿಹುದು ನೋಡೀಗ
ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ
ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ 2
ಜ್ಞಾನನಿಂದಕರೆಂಬ ಗೂಗೆಗಳು ಅಡಗಿದವು
ಕಾಣದಾದವು ಕುತರ್ಕಗಳೆಂಬ ತಾರೆಗಳು
ಸ್ವಾನುಭವಸುಜ್ಞಾನಭಾನುವುದಯಿಸುತಿಹನು
ಜ್ಞಾನಿಶಂಕರನ ಸದ್ಬೋಧವನೆ ಸ್ಮರಿಸುತಲಿ 3