ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಯಾ ಪ
ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ.
ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ
ತನಯನಗಿದ್ದುದ ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1
ದನುಜ ಭಂಜನನಾದ ಘನ ಮಹಿಮನೆ ಮಾಗ
ಧನಿಗಂಜಿ ಓಡಿದ್ದು ಹೇಳಲ್ಯಾ
ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ
ಅನುಗನಾಗಿದ್ದದ್ದು ಹೇಳಲ್ಯಾ ನಾನು 2
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಾಗಿ ಕದ್ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದು ಹೇಳಲ್ಯಾ ನಾನು 3
ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ
ಸತಿಗೊಶನಾದದ್ದು ಹೇಳಲ್ಯಾ
ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4
ಭೂತಳದೊಳು ದೇವತೆಗಳೊಡÀನೆ ಇಂಥ
ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠ್ಠಲನೆ ಅ
ದ್ಭುತ ಮಹಿಮನೆಂದು ಹೇಳಲ್ಯಾ ನಾನು 5