ಹನುಮಂತ ನೀನೆಂಥ ಬಲವಂತ
ಘನತರಕೈಲಾಸವನು ಬಾಲದೆತ್ತಿದೆ ಪ
ಹದಿನಾಲ್ಕು ಲೋಕಂಗಳುದರದಿಟ್ಟವನನ್ನು
ಸದಮಲಭಕ್ತಿಯಿಂ ಮುದದ್ಹೊತ್ತು ಹಾರಿದಿ 1
ಅಪರಿಮಿತ ಭುಜಬಲ ಕಪಿವರರೆಲ್ಲ ಬಿಟ್ಟು
ಕೃಪಾಕರನು ನಿನಗೆ ಗುಪಿತದುಂಗುರವಿತ್ತು 2
ಸಾಗರ ಹಾರಲು ಆಗದೆ ಸರ್ವರು
ನೀಗದ್ಯೋಚನೆ ಗೈಯೆ ಬೇಗ ಸಾಗರ ಜಿಗಿದಿ 3
ಲಂಕೆಯೆಲ್ಲವು ಒಂದೇ ಲಂಕಿಣ್ಯೋರ್ವಳು ಒಂದೇ
ಮಂಕುಹೆಣ್ಣೆಂದು ನೀ ಶಂಕೆಯಿಂ ಸದೆದೆಯೊ 4
ದುರುಳನ ಪುರ ಪೊಕ್ಕು ಸರುವ ಭವನಗಳ
ಪರಿಪರಿ ಶೋಧಿಸಿದಿ ಪರಮಪಾವನೆಯಳ 5
ಲೋಕಮಾತೆಯನು ಅಶೋಕವನದಿ ಕಂಡು
ಲೋಕವೀರನ ಅಂಗುಲೀಕವನಿತ್ತಯ್ಯ6
ಕ್ಷಿತಿಜೆ ದರುಶನದಿಂದ ಮತಿವಂತನೆನಿಸಿ ನೀ
ಕೃತಕೃತ್ಯನಾದಯ್ಯಾ ಸತತ ಕ್ಷಿತಿಯ ಮೇಲೆ 7
ಬಣಗು ರಕ್ಕಸಕುಲ ಕ್ಷಣದಿ ಅಳಿದು ನೀನು
ವನವ ನಾಶಗೈದು ದಿನಮಣಿಯಂತೊಪ್ಪುವಿ8
ಶೂರ ಅಕ್ಷಯಕುಮಾರಾದಿಗಳ ಮಹ
ಮೇರೆದಪ್ಪಿದಬಲ ಸೂರೆಗೈದಾಕ್ಷಣ9
ಮಂಕುದಶಕಂಠನ ಬಿಂಕವ ಮುರಿದಿ ಅ
ಸಂಖ್ಯ ವೀರರ ಕೊಂದು ಲಂಕಾದಹನ ಗೈದಿ 10
ಅತಿಭರದಿಂ ಬಂದು ಕ್ಷಿತಿಜಪತಿ ಶ್ರೀರಾಮ
ಗತಿ ಶುಭದ್ವಾಯ ಶ್ರುತಪಡಿಸಿ ಹಿತ ಪಡೆದ್ಯೊ 11