ಪಾಲಿಸು ಶ್ರೀಶನೆ ಪರಮ ಪವಿತ್ರನೆ
ಪಾವನ್ನ ಚರಿತನೆ ಪಾಲಿಸೆನ್ನ ಪ
ಕಾಲಕಾಲಕೆ ನಿನ್ನ ಮಹಿಮೆಯ
ತೋರಿಸಲಹುದು ಸರ್ವವ್ಯಾಪಕ
ಮಾಯಾದೇವಿಯರಮಣ ಶ್ರೀಪತೆ
ಕಾಯೊ ಶ್ರೀಹರಿವಾಸುದೇವನೆಅ.ಪ
ವಾಸುದೇವನೆ ನಿನ್ನ ಸೋಸಿಲಿ ಭಜಿಪರ
ಕ್ಲೇಶಗಳ್ಹರಿಸಿ ಸಂತೋಷವಿತ್ತು
ದೋಷದೂರನ ನಾಮ
ಆಸೆಯಿಂದ ಭಜಿಪರಸಂಗವನೂ
ನೀಡೆನುತ ಬಿನ್ನೈಸುವೆನೂ
ಎನ್ನೊಡೆಯ ನೀನೆಂದೆನುತ
ಅಡಿಗಳಿಗೆರಗುವೆನೂ
ಧೃಡಭಕುತಿ ನಿನ್ನೊಳಗಿರಿಸಿ
ರಕ್ಷಿಪುದೆಂದು ಬೇಡುವೆನೂ
ನುಡಿನುಡಿಗೆ ನಿನ್ನಯ ನುಡಿಗಳನು
ನುಡಿವಂಥ ಭಕ್ತರ
ಅಡಿಗಳಾಶ್ರಯ ಕೊಟ್ಟು ಕಾಯ್ವುದು
ಬಡವನೆನ್ನಲಿ ಬೇಡ ಎನ್ನನು
ಬಡವರಾಧಾರಿ ಶ್ರೀಹರಿ 1
ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ
ಬಿಂಕದಿಂದಲಿ ನಿಂತು ನೋಡುತಲಿ
ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ
ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು
ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ
ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ
ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ
ಉದಯ ಭಾಸ್ಕರನಂತೆ ಪೊಳೆಯುತ್ತ
ಮುದದಿ ಸಿರದಿ ಕಿರೀಟ ಹೊಳೆಯುತ್ತ
ಸದಮಲಾತ್ಮಕ ಸತ್ಯಮೂರುತಿ2
ಹೃದ್ಗೋಚರನಾಗು ಪದ್ಮಾನಾಭ
ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ
ಮನ್ಮನದ ಭಯಗಳವದ್ದು ಬಿಸುಡುತ ಸಲಹೊ
ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ-
ಪಾದಕೆ ನಮಿಪೆ ಶ್ರೀಹರಿಯೆ
ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು
ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ
ತೋಯಜಾಕ್ಷನೆ ತೋರು ನಿನ್ನಯ
ಚಾರು ಚರಣಕೆ ಬಾಗಿ ನಮಿಸುವೆ
ಕಾಯ್ವುದೆನ್ನನು ಕಮಲನಾಭವಿಠ್ಠಲನೆ
ಶ್ರೀಹರಿ ವಾಸುದೇವನೆ 3